ಸ್ಥಳಕ್ಕೆ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಎಂ.ಜಗದೀಶ್ ಭೇಟಿ
ಕೊಕ್ಕಡದ ಪಶುವೈದ್ಯ ಕುಮಾರ್ ಎಂಬವರು ಕೈಯಿಂದ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸು ದಾಖಲಾಗಿದೆ.
ಮೇ.13ರಂದು ಸಂಜೆ ಕೊಕ್ಕಡದಲ್ಲಿ ಅಲ್ಲಿನ ಪಶುವೈದ್ಯ ಕುಮಾರ್ ಅವರು ಕೈಯಿಂದ ಹಲ್ಲೆ ನಡೆಸಿದ ಪರಿಣಾಮ ಬೆಳ್ತಂಗಡಿ ತಾಲೂಕಿನ ಪಟ್ರಮೆ ನಿವಾಸಿ ಕೃಷ್ಣಪ್ಪ(56ವ.)ಎಂಬವರು ಬಿದ್ದು ಮೃತಪಟ್ಟಿದ್ದರು. ಇದೀಗ ಘಟನೆ ಕುರಿತಂತೆ ಕೃಷ್ಣಪ್ಪ ಅವರ ಪತ್ನಿ ಭಾರತಿ ಅವರು ಧರ್ಮಸ್ಥಳ ಪೊಲೀಸರಿಗೆ ಪಶುವೈದ್ಯರ ವಿರುದ್ಧ ದೂರು ನೀಡಿದ್ದಾರೆ.
ನನ್ನ ಪತಿ ಕೃಷ್ಣಪ್ಪ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮೇ.12ರಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡು ಮೇ.13ರಂದು ರಾತ್ರಿ ವಾಪಾಸ್ಸು ಕೊಕ್ಕಡಕ್ಕೆ ಬಂದಿರುತ್ತಾರೆ. ಅವರು ಕೊಕ್ಕಡ ಜಂಕ್ಷನ್ ಬಳಿ ನಿಂತಿದ್ದಾಗ ಕೊಕ್ಕಡದ ಪಶು ವೈದ್ಯರಾದ ಕುಮಾರ್ ಎಂಬವರು ಯಾವುದೋ ಕ್ಷುಲ್ಲಕ ವಿಚಾರಕ್ಕೆ ಕೈಯಿಂದ ಹಲ್ಲೆ ಮಾಡಿರುತ್ತಾರೆ. ಹಲ್ಲೆಯ ಪರಿಣಾಮ ಪತಿ ಕೃಷ್ಣಪ್ಪ ಅವರು ಬಿದ್ದು ಮೃತಪಟ್ಟಿರುವುದಾಗಿ ಭಾರತಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಸ್ಥಳಕ್ಕೆ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಎಂ.ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು.
ಆರೋಪಿ ಕುಮಾರನನ್ನು ಮೇ.14ರಂದು ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.