ಕಂಪೌಂಡ್ ಗೋಡೆ ಮನೆ ಗೋಡೆ ಮೇಲೆ ಉರುಳಿ ಒಂದೇ ಕುಟುಂಬದ ನಾಲ್ವರ ದಾರುಣ ಅಂತ್ಯ

ಶೇರ್ ಮಾಡಿ

ಕರಾವಳಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಂಪೌಂಡ್ ಗೋಡೆ ಮನೆಯ ಗೋಡೆ ಮೇಲೆ ಉರುಳಿ ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಸಾವನ್ನಪ್ಪಿದ ಘಟನೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರದಲ್ಲಿ ಮಂಗಳವಾರ ನಸುಕಿನ ಜಾವ ಸಂಭವಿಸಿದೆ.

ಮನೆಯೊಳಗೆ ವಾಸ್ತವ್ಯವಿದ್ದ ರಿಹಾನ ಮಂಝಿಲ್ ಮನೆಯ ಯಾಸಿರ್(45), ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಹಾನ (11)ಮತ್ತು ರಿಫಾನ (17) ಮೃತರು. ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಮನೆಯ ಗೋಡೆ, ಕುಸಿದು ದುರಂತ ಸಂಭವಿಸಿದೆ.

ಯಾಸೀರ್ ಮಂಗಳೂರಿನ ಬಂದರಿನಲ್ಲಿ ಮಡ್ಡಿ ಆಯಿಲ್ ನಿರ್ವಹಣೆ ಕಾರ್ಯ ನಿರ್ವಹಿಸುತ್ತಿದ್ದರು. ರಾತ್ರಿ ಊಟ ಮುಗಿಸಿ ಮನೆಯ ಕೋಣೆಯಲ್ಲಿ ಮಲಗಿದ್ದ ಇಬ್ಬರು ಪುತ್ರಿಯರು ಹಾಗೂ ದಂಪತಿ ಬೆಳಗ್ಗಿನ ಜಾವ ಬೆಳಗ್ಗಿನ ಜಾವ ಇಲ್ಲವಾಗಿದ್ದಾರೆ.

ಧಾರಾಕಾರ ಮಳೆ ಸುರಿದ ಪರಿಣಾಮ ಕಂಪೌಂಡ್ ಗೋಡೆ ಹಾಗೂ ಎರಡು ಅಡಕೆ ಮರ ಯಾಸಿರ್ ಅವರ ಮನೆ ಮೇಲೆ ಉರುಳಿಬಿದ್ದಿದೆ. ರಿಹಾನಾ ಹಾಗೂ ರಿಫಾನ ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಾಲೆ ಹಾಗೂ ಕಾಲೇಜಿಗೆ ತೆರಳುತ್ತಿದ್ದರು. ಆರು ವರ್ಷಗಳ ಹಿಂದೆ ಮನೆ ಖರೀದಿಸಿದ್ದ ಯಾಸಿರ್ ಒಂದು ವರ್ಷ ಮನೆಯನ್ನು ಲೀಸ್ ಗೆ ನೀಡಿ ಆರು ತಿಂಗಳ ಹಿಂದೆಯಷ್ಟೇ ಮನೆಗೆ ವಾಪಸ್ಸಾಗಿದ್ದರು. ಎರಡು ವರ್ಷಗಳ ಹಿಂದೆಯೂ ಮನೆ ಮೇಲೆ ಇದೇ ರೀತಿ ಕಂಪೌಂಡ್ ಕುಸಿದಿದ್ದು, ಯಾವುದೇ ಪ್ರಾಣಾಪಾಯವಾಗಿರಲಿಲ್ಲ ಎನ್ನಲಾಗಿದೆ.

ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸ್ಥಳೀಯರು ಮೂರು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆದರೆ, ಅಗ್ನಿಶಾಮಕ ದಳ ಸ್ಥಳೀಯರ ಜೊತೆ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಕೊನೆಯ ಮೃತದೇಹವನ್ನು ಹೊರತೆಗೆದಿದ್ದಾರೆ.

ದೊಡ್ಡಮಗಳು ರಶೀನಾಳನ್ನು ಕೇರಳ ಕಡೆಗೆ ವಿವಾಹ ಮಾಡಿಕೊಡಲಾಗಿದ್ದು, ಬಕ್ರೀದ್ ಗೆಂದು ಬಂದವರು ನಿನ್ನೆಯಷ್ಟೇ ಗಂಡನ ಮನೆಗೆ ವಾಪಸ್ಸಾಗಿದ್ದರು. ತನಿಖೆ ಮುಂದುವರಿದಿದೆ.

Leave a Reply

error: Content is protected !!