ಮಗನಿಗೆಂದು ಗುರಿಯಿಟ್ಟ ಕೋವಿಗೆ ಪತ್ನಿ ಬಲಿ; ವಿಷ ಸೇವಿಸಿ ಪತಿ ಆತ್ಮಹತ್ಯೆ

ಶೇರ್ ಮಾಡಿ

ಸುಳ್ಯ: ಪತ್ನಿಯನ್ನು ಗುಂಡಿಕ್ಕಿ ಕೊಂದು ಗಂಡ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ನೆಲ್ಲೂರು‌‌ ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ನಡೆದಿದೆ

ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಿಮಜಲಿನ ಕೃಷಿಕ ರಾಮಚಂದ್ರ ಗೌಡ(54) ತನ್ನ ಪತ್ನಿ ವಿನೋದ(45) ಅವರನ್ನು ಕೋವಿಯಲ್ಲಿ ಗುಂಡು ಹಾರಿಸಿ ಕೊಂದು ಬಳಿಕ ರಾಮಚಂದ್ರ ಅವರು ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮಚಂದ್ರರು ಕುಡಿದು ಬಂದು ಜಗಳವಾಡುವುದು ಇತ್ತೀಚೆಗೆ ವಿಪರೀತವಾಗಿತ್ತೆನ್ನಲಾಗಿದೆ. ಅವರಿಗೆ ಅಡಕೆ, ರಬ್ಬರ್ ಹೀಗೆ ಸುಮಾರು 5ಎಕ್ರೆಯಷ್ಟು ಕೃಷಿ ಭೂಮಿ ಇದೆ. ಬೆಳೆಗಳಿಗೆ ಕಾಡುಪ್ರಾಣಿಗಳ ಉಪಟಳವಿರುವುದರಿಂದ ಲೈಸೆನ್ಸ್ ಇರುವ ಕೋವಿ ಕೂಡ ಅವರು ಇರಿಸಿಕೊಂಡಿದ್ದರು. ಅವರಿಗೆ ಪತ್ನಿ ವಿನೋದ(43) ಹಾಗೂ ಮೂವರು ಪುತ್ರರು ಇದ್ದಾರೆ.

ಸುಮಾರು ಮೂರು ತಿಂಗಳ ಹಿಂದೆ ಅವರು ಕುಡಿದು ಬಂದು ಪತ್ನಿಯೊಡನೆ ಜಗಳವಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಮಕ್ಕಳನ್ನು ಕೋವಿ ಹಿಡಿದುಕೊಂಡು ಅಟ್ಟಾಡಿಸಿದ್ದರೆನ್ನಲಾಗಿದೆ. ಈ ಘಟನೆ ಪೋಲೀಸ್ ಠಾಣೆಯ ಮೆಟ್ಟಿಲೇರಿ ಪೋಲೀಸರ ಸೂಚನೆಯಂತೆ ಮನೆಯಲ್ಲಿದ್ದ ಕೋವಿಯನ್ನು ಸುಳ್ಯದ ಕೋವಿ ಮಳಿಗೆಯಲ್ಲಿ ಮೂರು ತಿಂಗಳ ಅವಧಿಗೆ ಡೆಪಾಸಿಟ್ ಮಾಡಿಸಲಾಗಿತ್ತು. ಅವಧಿ ಮುಗಿದ ಹಿನ್ನೆಲೆಯಲ್ಲಿ ಪತ್ನಿ ವಿನೋದ ಅವರ ವಿನಂತಿಯ ಮೇರೆಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಕೋವಿ ಬಿಡಿಸಿಕೊಳ್ಳಲು ಸಹಕರಿಸಿದ್ದರು. ಕೋವಿಯನ್ನು ಮನೆಗೆ ವಾಪಸ್ ತಂದು ಮೂರು ದಿನವಷ್ಟೆ ಆಗಿತ್ತು.

ಶುಕ್ರವಾರ ರಾತ್ರಿ ಕುಡಿದು ಬಂದು 10ಗಂಟೆಯ ನಂತರ ಪತ್ನಿ ವಿನೋದ ಹಾಗೂ ಪುತ್ರ ಪ್ರಶಾಂತ್ ರೊಡನೆ ರಾಮಚಂದ್ರ ಗೌಡರು ಜಗಳ ಆರಂಭಿಸಿದ್ದಾರೆ. ಈ ರೀತಿ ಜಗಳವಾಡುವುದನ್ನು ಹಿರಿಮಗ ಪ್ರಶಾಂತ್ ವಿರೋಧಿಸಿದ್ದಾನೆ. ಆಗ ರಾತ್ರಿ 10.30. ರಾಮಚಂದ್ರ ಗೌಡರು ಮನೆಯಲ್ಲಿದ್ದ ಕೋವಿ ಎತ್ತಿಕೊಂಡು, ಮಗನಿಗೆ ಗುಂಡಿಕ್ಕಲು ಬಂದಿದ್ದಾರೆ.

ಇದನ್ನು ಕಂಡ ಪತ್ನಿ ವಿನೋದರವರು ಅಡ್ಡ ಬಂದಿದ್ದಾರೆ. ಗಂಡನನ್ನು ತಡೆಯಲು ಪ್ರಯತ್ನಿಸಿ, ಅವರು ಮಲಗುತ್ತಿದ್ದ ಕೊಠಡಿಯ ಕಡೆಗೆ ದೂಡಿಕೊಂಡು ಬಂದಿದ್ದಾರೆ. ಆ ವೇಳೆ ರಾಮಚಂದ್ರ ಗೌಡರು ಕೋವಿಯ ಟ್ರಿಗರ್ ಎಳೆದಿದ್ದಾರೆ. ಗುಂಡು ವಿನೋದ ಅವರ ಎದೆಯನ್ನು ಹೊಕ್ಕು ಅವರು ಧರಾಶಾಯಿಯಾಗಿ ಪ್ರಾಣ ಬಿಟ್ಟಿದ್ದಾರೆ. ಇದನ್ನು ಕಂಡು ರಾಮಚಂದ್ರ ಗೌಡರಿಗೆ ಕುಡಿತದ ಮತ್ತು ಇಳಿದಿದೆ. ಇನ್ನು ತನಗೆ ಉಳಿಗಾಲವಿಲ್ಲವೆಂದು ತಿಳಿದು ರಬ್ಬರ್ ಗೆ ಹಾಕಲೆಂದು ತಂದಿದ್ದ ವಿಷವನ್ನು ಕುಡಿದು ಬಂದು ಪತ್ನಿ ಬಿದ್ದಲ್ಲಿಗೇ ಬಂದು ಬಿದ್ದಿದ್ದಾರೆ.

ಆ ಹೊತ್ತಲ್ಲಿ ಮನೆಯಲ್ಲಿ ಹಿರಿಮಗ ಪ್ರಶಾಂತ್ ಮಾತ್ರ ಇದ್ದನೆನ್ನಲಾಗಿದೆ. ಎರಡನೇ ಮಗ ನಿಶಾಂತ್ ಸುಳ್ಯದಲ್ಲಿದ್ದರೆಂದೂ, ಕಿರಿಮಗ ರಂಜಿತ್ ಬೆಳ್ತಂಗಡಿಗೆ ಹೋಗಿದ್ದರೆಂದೂ ತಿಳಿದುಬಂದಿದೆ.

ರಾತ್ರಿಯೇ ವಿಷಯ ಸ್ಥಳೀಯರಾದ ರಾಘವ ಕಂಜಿಪಿಲಿ ಹಾಗೂ ಹರೀಶ್ ಕಂಜಿಪಿಲಿಯವರಿಗೆ ತಿಳಿದು, ಅವರು ಪೋಲೀಸರಿಗೆ ತಿಳಿಸಿದರು, ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಸ್ಥಳಕ್ಕೆ ಪಶ್ಚಿಮ ವಲಯದ ಐಜಿ ಅಮಿತ್ ಸಿಂಗ್ ಭೇಟಿ ನೀಡಿ ಕೊಲೆ ಮತ್ತು ಆತ್ಮಹತ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮೃತದೇಹಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಡಿವೈಎಸ್‌ಪಿ ಅರುಣ್ ನಾಗೇಗೌಡ, ಎಸ್.ಪಿ.ಯತೀಶ್, ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದರು.

ವಿಧಾನಸಭಾಧ್ಯಕ್ಷ, ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.

  •  

Leave a Reply

error: Content is protected !!