ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆ.ಸಿ.ರೋಡಿನಲ್ಲಿ ಶುಕ್ರವಾರ (ಜ.17) ಮಧ್ಯಾಹ್ನ ಹಾಡಹಗಲೇ ಬ್ಯಾಂಕ್ ಗೆ ನುಗ್ಗಿದ ಖದೀಮರ ಗುಂಪು ಹತ್ತು ಕೋಟಿ ರೂ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದೆ.
ಒಟ್ಟು ಆರು ಜನರಿದ್ದ ದರೋಡೆಕೋರರ ತಂಡವು ಕೋಟೆಕಾರು ಬ್ಯಾಂಕ್ ಕೆ.ಸಿರೋಡು ಶಾಖೆಗೆ ನುಗ್ಗಿ, ಪಿಸ್ತೂಲು ಮತ್ತು ತಲವಾರು ತೋರಿಸಿ ಲೂಟಿ ಮಾಡಿದೆ.
ಗ್ಯಾಂಗ್ ನಲ್ಲಿ ಆರು ಜನರಿದ್ದು, ಐವರು ಬ್ಯಾಂಕ್ ಗೆ ನುಗ್ಗಿ ಓರ್ವ ರಸ್ತೆಯಲ್ಲಿದ್ದ. ಪಿಸ್ತೂಲು ಮತ್ತು ತಲವಾರು ತೋರಿಸಿದ ಗ್ಯಾಂಗ್ ಬ್ಯಾಂಕ್ ನಿಂದ ಸುಮಾರು ಐದು ಲಕ್ಷ ರೂ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದೆ. ಒಟ್ಟು ಹತ್ತು ಕೋಟಿ ರೂ ಮೌಲ್ಯದ ದರೋಡೆ ಮಾಡಲಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.
ಬ್ಯಾಂಕ್ ಕಚೇರಿ ಮೊದಲ ಮಹಡಿಯಲ್ಲಿದೆ. ಕಟ್ಟಡದ ಕೆಳಗಿನ ಭಾಗದಲ್ಲಿದ್ದ ಬೇಕರಿಯಲ್ಲಿ ನಾಲ್ಕು ವಿದ್ಯಾರ್ಥಿಗಳು ತಿಂಡಿ ತಿನ್ನುತ್ತಿದ್ದರು. ಬ್ಯಾಂಕ್ ನ ಗಲಾಟೆ ಕೇಳಿ ಮೊದಲ ಮಹಡಿಗೆ ಬಂದ ವಿದ್ಯಾರ್ಥಿಗಳಿಗೆ ಆಗಂತುಕರು ಪಿಸ್ತೂಲು ತಲವಾರ್ ತೋರಿಸಿ ಓಡಿಸಿದ್ದಾರೆ. ಅಗ ಕೆಳಕ್ಕೆ ಬಂದ ಹುಡುಗರು ಬೊಬ್ಬೆ ಹಾಕಿದ್ದಾರೆ.
ದರೋಡೆ ನಡೆಸಿ ಹಳೆಯ ಫಿಯಾಟ್ ಕಾರಿನಲ್ಲಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ. ದರೋಡೆಕೋರರು ಕನ್ನಡ ಮಾತನಾಡುತ್ತಿದ್ದರು ಎನ್ನಲಾಗಿದೆ.
ವಿಧಾನಸಭಾಧ್ಯಕ್ಷ, ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.