


ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದಲ್ಲಿರುವ ಶ್ರೀ ಶಾಸ್ತಾರೇಶ್ವರ ದೇವಾಲಯ, ಕುತ್ರಾಡಿ ಹಾರ್ಪಳದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಏ. 22ರಂದು ವಿಜೃಂಭಣೆಯಿಂದ ನಡೆಯಲಿದೆ. ಈ ಮಹೋತ್ಸವವನ್ನು ಸುಗಮವಾಗಿ ನಡೆಸಲು ದೇವಸ್ಥಾನದ ಆಡಳಿತ ಸಮಿತಿಯ ನೇತೃತ್ವದಲ್ಲಿ ಉತ್ಸವ ಸಮಿತಿಯನ್ನು ರಚಿಸಲಾಗಿದ್ದು, ಭಕ್ತರ ಸಮ್ಮುಖದಲ್ಲಿ ಹೊಸ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ.

ನೂತನ ಉತ್ಸವ ಸಮಿತಿಯ ಅಧ್ಯಕ್ಷರಾಗಿ ರುಕ್ಮಯ ಗೌಡ ದ.ಗೋಡಿ ಬೆಂಗಳೂರು ಉಪಾಧ್ಯಕ್ಷರಾಗಿ ನಾಗೇಶ್ ಗೌಡ ಗಡಿಕಲ್ಲು ಕಾರ್ಯದರ್ಶಿಗಳಾಗಿ ನಿತೇಶ್ ಪುಲಿತಡಿ ಹಾಗೂ ರಜನಿ ಜಾಲ್ಮನೆ, ಸಹ ಕಾರ್ಯದರ್ಶಿಯಾಗಿ ಭರತ್ ಬರಮೇಲು ಅವರನ್ನು ಆಯ್ಕೆ ಮಾಡಲಾಗಿದೆ.
ಉತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ಹೋಮ-ಹವನಗಳು, ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಮಹೋತ್ಸವವು ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡುವಂತೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ಈ ಸಭೆಯಲ್ಲಿ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಊರಿನ ಪ್ರಮುಖರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಭಕ್ತಾದಿಗಳು ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಆಡಳಿತ ಸಮಿತಿ ಹಾಗೂ ಉತ್ಸವ ಸಮಿತಿ ಭಕ್ತರಿಗೆ ಆಹ್ವಾನ ನೀಡಿದೆ.




