


ನೆಲ್ಯಾಡಿ ನೆಲ್ಯಾಡಿ ವಿ.ವಿ ಕಾಲೇಜುನಲ್ಲಿ ಯುವನಿಧಿ ಯೋಜನೆ ಉದ್ಘಾಟನೆ ಮತ್ತು ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವು ಮಾ.24ರಂದು ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಅವರ ಮಾರ್ಗದರ್ಶನದಲ್ಲಿ, ವಿಶ್ವವಿದ್ಯಾನಿಲಯದ ಮಾನವಿಕ ಸಂಘ ಹಾಗೂ ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಯಿತು.

ಡಾ. ಸೀತಾರಾಮ ಪಿ., ಸಂಚಾಲಕರು, ಮಾನವಿಕ ಸಂಘ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭವಾಗಿದ್ದು, ಮುಖ್ಯ ಅತಿಥಿಯಾಗಿ ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಶ್ರೀಮತಿ ಉಷಾ ಅಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ, “ಸರ್ಕಾರವು ರೂಪಿಸಿರುವ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಜೀವನ ಸುಧಾರಣೆಗೆ ಪ್ರಮುಖ ಸಾಧನಗಳಾಗಿವೆ. ಯುವನಿಧಿ ಯೋಜನೆ ಯುವಕರಿಗೆ ಆತ್ಮಸ್ಥೈರ್ಯವನ್ನು ಒದಗಿಸಿ, ಭವಿಷ್ಯದ ಭದ್ರ ಬುನಾದಿ ಹಾಕಲು ಸಹಕಾರಿಯಾಗಬೇಕು” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಉದ್ಯೋಗ ವಿನಿಮಯ ಕೇಂದ್ರ ಶ್ರೀಮತಿ ಮಂಜೂಷ, ಅವರು “ಯುವನಿಧಿ ಯೋಜನೆ” ಕುರಿತಂತೆ ಸಮಗ್ರ ಮಾಹಿತಿಯನ್ನು ನೀಡಿದರು. ಯೋಜನೆಯ ಅರ್ಹತೆ, ನೋಂದಣಿ ಪ್ರಕ್ರಿಯೆ, ಫಲಾನುಭವಿಗಳ ಲಾಭಗಳು, ಹಾಗೂ ಉದ್ಯೋಗ ಮತ್ತು ಸ್ವಾವಲಂಬನೆಗೆ ಇದರ ನೆರವು ಕುರಿತು ವಿವರವಾಗಿ ವಿವರಿಸಿದರು.
ಅವಿನಾಶ ಬೈತಡ್ಕ, ಕಡಬ ತಾಲೂಕಿನ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು, ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ, “ಪದವಿ ಪಡೆದ ನಂತರ ಯುವಕರು ಮನೆಯ ಆಧಾರವಿಲ್ಲದೆ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಇಂತಹ ಯೋಜನೆಗಳು ಬಹುದೊಡ್ಡ ನೆರವಾಗುತ್ತವೆ” ಎಂದರು.

ಕನ್ನಡ ಉಪನ್ಯಾಸಕ ಡಾ.ನೂರಂದಪ್ಪ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಶ್ರುತಿ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.



