25ನೇ ವರ್ಷದ “ಕರುಂಬಿತ್ತಿಲ್ ಶಿಬಿರ” ಕ್ಕೆ ಚಾಲನೆ

ಶೇರ್ ಮಾಡಿ

ವಿದುಷಿ ಕೃಷ್ಣವೇಣಿ ಅಮ್ಮ ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ | ದೇಶದ ಹೆಸರಾಂತ ವಿದ್ವಾಂಸರು ಶುಭಾಶಯ ಕೋರಿಕೆ

ಕೊಕ್ಕಡ : ನಿಡ್ಲೆ ಸಮೀಪ ಕರುಂಬಿತ್ತಿಲ್‌ನ ಸಾಂಸ್ಕೃತಿಕ ಕೇಂದ್ರದಲ್ಲಿ ಮೇ 20ರಿಂದ 25ರ ವರೆಗೆ ನಡೆಯುತ್ತಿರುವ 25ನೇ ವರ್ಷದ “ಕರುಂಬಿತ್ತಿಲ್ ಶಿಬಿರ”ಕ್ಕೆ ಮಂಗಳವಾರ ಅದ್ಧೂರಿಯಾಗಿ ಚಾಲನೆ ದೊರಕಿತು. ಶಿಬಿರವನ್ನು ವಿದುಷಿ ಶ್ರೀಮತಿ ಕೃಷ್ಣವೇಣಿ ಅಮ್ಮ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ವಾನ್ ವಿಠಲ ರಾಮಮೂರ್ತಿ ಅವರು ಶಿಬಿರಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವ ಮೂಲಕ ಸ್ವಾಗತ ಭಾಷಣ ನೆರವೇರಿಸಿದರು. ಬಳಿಕ ಅವರು ಹಾಗೂ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಅವರು ಸಂದರ್ಭೋಚಿತವಾಗಿ ಮಾತನಾಡಿ ಶಿಬಿರದ ಮಹತ್ವವನ್ನು ವಿವರಿಸಿ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಹೆಸರಾಂತ ವಿದ್ವಾನ್ ಕೆ.ಎಂ.ಎಸ್ ಮಣಿ ಅವರು ಕೂಡ ಮಾತುಗಳ ಮೂಲಕ ಶಿಬಿರದ ಉದ್ದೇಶವನ್ನು ಪ್ರಶಂಸಿಸಿದರು. ವಿದ್ವಾನ್ ಹೊಸಹಳ್ಳಿ ವೆಂಕಟ್ರಾಂ ಅವರು ದೂರವಾಣಿ ಮೂಲಕ ಸಂದೇಶ ನೀಡಿದ್ದು, ಶಿಬಿರಾರ್ಥಿಗಳಿಗೆ ತಮ್ಮ ಹೃದಯದ ಪೂರ್ಣ ಶುಭಾಶಗಳನ್ನು ಅರ್ಪಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಶ್ರೀಮತಿ ರಾಜರಾಜೇಶ್ವರಿ ಭಟ್ ಅವರು ವಂದಿಸಿದರು. ಮಧ್ಯಾಹ್ನದ ನಂತರ ನಡೆದ ಶಿಬಿರದ ಅಭ್ಯಾಸ ಸರಣಿಯಲ್ಲಿ ಮೈಸೂರಿನ ಪ್ರಸಿದ್ಧ ಸಂಗೀತ ವಿದುಷಿ ಆರ್.ಎನ್. ಶ್ರೀಲತಾ ಅವರು ಶಿಬಿರಾರ್ಥಿಗಳಿಗೆ ಶ್ರೀ ಪುರಂದರದಾಸರ ಕೃತಿಗಳು, ವೀಣೆ ಸುಬ್ಬಣ್ಣರ ಮತ್ತು ಶ್ರೀ ಚೌಡಯ್ಯನವರ ರಚನೆಗಳನ್ನು ವಿಶಿಷ್ಟವಾಗಿ ಕಲಿಸಿಕೊಟ್ಟರು.

ನಾಳೆಯ ವಿಶೇಷ ಆಕರ್ಷಣೆ:
ಶಿಬಿರದ ಎರಡನೇ ದಿನವಾದ ನಾಳೆ (ಮೇ 21) ವಿಶೇಷ ಕಾರ್ಯಕ್ರಮಗಳಾಗಿ: ವಿದ್ವಾನ್ ಶ್ರೀ ಹೊಸಹಳ್ಳಿ ವೆಂಕಟ್ರಾಂ ಮತ್ತು ಅವರ ತಂಡದಿಂದ ವೈಯಲಿನ್ ಕಾರ್ಯಕ್ರಮ, ಲಕ್ಷ್ಯ ಬ್ಯಾಂಡ್ ತಂಡದಿಂದ ಸಾಂದ್ರ ಸಂಗೀತ ಕಾರ್ಯಕ್ರಮ, ವೈಯಲಿನ್ ಮಾಂತ್ರಿಕ ಎಂದೇ ಹೆಸರು ಪಡೆದ ಶ್ರೀ ವಿ.ವಿ ಸುಬ್ರಮಣ್ಯಂ ಹಾಗೂ ಸಂಗಡಿಗರಿಂದ ವೈಯಲಿನ್ ಸನ್ನಿವೇಶಗಳು ನಡೆಯಲಿವೆ.

  •  

Leave a Reply

error: Content is protected !!