

ಮಂಗಳೂರು : ಮದುವೆ ಸಂಬಂಧ ವಿಚಾರದಲ್ಲಿ ಅಸಮಾಧಾನಗೊಂಡು ತನ್ನ ಚಿಕ್ಕಪ್ಪನ ಮೇಲೆ ಆರೋಪಿ ಚೂರಿ ಇರಿತಗೈದಿದ್ದು, ಇದರಿಂದ ಗಂಭೀರ ಗಾಯಗೊಂಡ ಚಿಕ್ಕಪ್ಪ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ವಳಚ್ಚಿಲ್‌ನಲ್ಲಿ ನಡೆದಿದೆ. ಘಟನೆ ವೇಳೆ ಇನ್ನಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಳಚ್ಚಿಲ್ ನಿವಾಸಿ ಸುಲೈಮಾನ್ (60) ಮೃತಪಟ್ಟವರು. ಅವರ ಇಬ್ಬರು ಮಕ್ಕಳು ರಿಯಾಬ್ ಮತ್ತು ಶಿಹಾಬ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಸ್ತಾಫ್ ಎಂಬಾತ ಈ ಹೀನ ಕ್ರೂರತೆಗೆ ಕೈಹಾಕಿದ್ದು ಆರೋಪಿಯಾಗಿದ್ದಾರೆ.
ಪ್ರಕರಣ ವಿವರ: ಮುಸ್ತಾಕ್ ಗೆ 8 ತಿಂಗಳ ಹಿಂದೆ ಮದುವೆಯಾಗಿದ್ದು, ಇದಕ್ಕೆ ಮದುವೆ ಸಂಧಾನದ ಏಜೆಂಟ್ ಆಗಿದ್ದ ಆತನ ಚಿಕ್ಕಪ್ಪ ಸುಲೈಮಾನ್ ಅಡ್ಡೂರಿನ ಯುವತಿಯನ್ನು ನೋಡಿ ಮದುವೆ ಮಾಡಿಸಿದ್ದರು. ಇದೇ ವಿಚಾರದಲ್ಲಿ ಎರಡು ಕುಟುಂಬಗಳ ಮಧ್ಯೆ ಮನಸ್ತಾಪ ಉಂಟಾಗಿತ್ತು.
ಸುಲೈಮಾನ್ ಮದುವೆ ಸಂಧಾನ ಸಂದರ್ಭ ಹುಡುಗಿ ವಿಚಾರದಲ್ಲಿ ಕೆಲವೊಂದು ಸೂಕ್ಷ್ಮ ವಿಚಾರವನ್ನು ಮುಚ್ಚಿಟ್ಟು ತನ್ನ ಅಣ್ಣನ ಮಗ ಮುಸ್ತಾಫ್ ಗೆ ಸಂಧಾನ ಮಾಡಿಸಿ 8 ತಿಂಗಳ ಹಿಂದೆ ಮದುವೆ ಮಾಡಿಸಿದ್ದರು. ಇದು ಮಾತ್ರವಲ್ಲದೆ ಮದುವೆ ಬಳಿಕ ಗಂಡನ ಬಳಿ ಅನುಮತಿ ಪಡೆಯದೇ ಯುವತಿ ಪದೇ ಪದೇ ತನ್ನ ತಾಯಿ ಮನೆ ಅಡ್ಡೂರಿಗೂ ತೆರಳಿದ್ದಳು. ಈ ವಿಚಾರದಲ್ಲಿ ಮುಸ್ತಾಕ್ ಗೆ ಆಕ್ರೋಶವಿತ್ತು.
ಗುರುವಾರ ಸಂಜೆ ಇದೇ ವಿಚಾರದಲ್ಲಿ ಮುಸ್ತಾಫ್ ಮತ್ತು ಆತನ ಪತ್ನಿ ಮಧ್ಯೆ ಜಗಳವಾಗಿತ್ತು. ಈ ಸಂದರ್ಭ ಸುಲೈಮಾನ್ ತನ್ನ ಅಣ್ಣನಿಗೂ ಹಾಗೂ ಅಣ್ಣನ ಮಕ್ಕಳಿಗೂ ಬೈಯುತ್ತಾರೆ. ಇದು ಎರಡು ಕುಟುಂಬಗಳ ಮಧ್ಯೆ ತಾರಕಕ್ಕೇರಿ ಮುಸ್ತಾಫ್ ಮನೆಯಿಂದ ಚೂರಿಯನ್ನು ತಂದು ಸುಲೈಮಾನ್ ಮತ್ತು ಅವರ ಇಬ್ಬರು ಮಕ್ಕಳಾದ ರಿಯಾಬ್ ಮತ್ತು ಶಿಹಾಬ್‌ಗೆ ಹಾಕುತ್ತಾನೆ. ಇದರಿಂದ ಗಂಭೀರ ಗಾಯಗೊಂಡ ಸುಲೈಮಾನ್ ಹಾಗೂ ಮತ್ತಿಬ್ಬರನ್ನು ಅಡ್ಯಾರ್ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆದರೆ ಅಷ್ಟರಲ್ಲೇ ಸುಲೈಮಾನ್ ಮೃತಪಟ್ಟಿದ್ದರು. ಉಳಿದಿಬ್ಬರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.













