

ಕೊಕ್ಕಡ: ಕಳೆದ ಎರಡು ವರ್ಷಗಳಿಂದ ವ್ಯವಸ್ಥಾಪನ ಸಮಿತಿ ರಚನೆಯಿಲ್ಲದೆ ಇದ್ದ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಇದೀಗ ಹೊಸ ಸಮಿತಿಯ ಆಯ್ಕೆ ಪ್ರಕ್ರಿಯೆ ಜು.11ರಂದು ದೇವಸ್ಥಾನದ ಆವರಣದಲ್ಲಿ ನೆರವೇರಿತು. ಈ ಸಭೆಗೆ ಆಡಳಿತಾಧಿಕಾರಿ ದಿನೇಶ್ ಎಂ. ಅವರು ಅಧ್ಯಕ್ಷತೆ ವಹಿಸಿದ್ದರು.
ಒಟ್ಟು 9 ಜನರು ಸಮಿತಿಗೆ ಅರ್ಜಿ ಸಲ್ಲಿಸಿದ್ದರಲ್ಲಿ 2 ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲಾಗಿದ್ದು, 7 ಅರ್ಜಿಗಳ ಪರಿಶೀಲನೆ ನಡೆಸಿ ಸಮಿತಿ ರಚನೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಸುನೀಲ್ ಗೋಖಲೆ ಉಮ್ಮಂತಿಮಾರ್ ಆಯ್ಕೆಯಾಗಿದ್ದಾರೆ. ಅರ್ಚಕರಾಗಿ ಪಿ.ರಾಮ ಕಾರಂತ್ ಮತ್ತು ಸಮಿತಿಯ ಸದಸ್ಯರಾಗಿ ಚೆನ್ನಪ್ಪ ಬಂಗ್ಲೆತಡ್ಕ, ವಿಮಲ ಎಳ್ಳುಮಜಲು, ಪ್ರೇಮ ದೇವಸ, ರಮೇಶ್ ಮುಚ್ಚಿರಡ್ಕ, ಸುಂದರ ಗೌಡ ನಾಗನಡ್ಕ ಹಾಗೂ ಕೆ.ಸುನಿಲ್ ಗೋಖಲೆ ಅವರನ್ನು ನೇಮಕ ಮಾಡಲಾಗಿದೆ.
ಈ ಆಯ್ಕೆ ಸಭೆಯಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶಬರಾಯ ಹಾಗೂ ಸದಸ್ಯ ಪ್ರಮೋದ್ ಶೆಟ್ಟಿ ರೆಖ್ಯ ಉಪಸ್ಥಿತರಿದ್ದು, ಆಯ್ಕೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದರು. ಶಿಶಿಲ ಪಂಚಾಯತ್‌ನ ಸಿಬ್ಬಂದಿ ಸುಂದರ ಅವರು ಸಹಕರಿಸಿದ್ದರು. ಊರಿನ ಪ್ರಮುಖರು, ಹಿರಿಯರು ಸಭೆಯಲ್ಲಿ ಉಪಸ್ಥಿತರಿದ್ದರು.










