ಸಮಯದ ಸದುಪಯೋಗ ಮತ್ತು ಸೃಜನಶೀಲತೆ – ಅಶ್ವಿನ್ ಎಲ್ ಶೆಟ್ಟಿ

ಶೇರ್ ಮಾಡಿ

ಉಜಿರೆ: “ಸಮಯವನ್ನು ಖರೀದಿಸಲು ಸಾಧ್ಯವಿಲ್ಲ. ಆದರೆ ಸೃಜನಶೀಲತೆ ಮತ್ತು ಸಮಯದ ಸದುಪಯೋಗದಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಸಾಧ್ಯ” ಎಂದು ಸಾಣೂರಿನ ವಿದ್ಯಾರಶ್ಮಿ ಮಹಾವಿದ್ಯಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿನ್ ಎಲ್ ಶೆಟ್ಟಿ ವಿದ್ಯಾರ್ಥಿಗಳಿಗೆ ಉದ್ದೇಶಿಸಿ ಪ್ರೇರಣಾದಾಯಕವಾಗಿ ಹೇಳಿದ್ದಾರೆ.

ಜುಲೈ 19 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತರಗತಿ ಪ್ರತಿನಿಧಿಗಳ ಹಾಗೂ ಸ್ವಚ್ಛತಾ ಸೇನಾನಿಗಳ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಕಲಿಕೆಯು ಕಬ್ಬಿಣದ ಕಡಲೆ ಅಲ್ಲ. ಸಂತಸದ ಕಲಿಕೆಯೊಂದಿಗೆ ಉತ್ತಮ ಫಲಿತಾಂಶ ಗಳಿಸಬಹುದು. ಜ್ಞಾನವೇ ಶಕ್ತಿ. ಈ ಶಕ್ತಿಯು ವ್ಯಕ್ತಿಯನ್ನು ಸ್ವಾವಲಂಬಿ ಮತ್ತು ಯಶಸ್ವಿಯಾಗಿಸಲು ನೆರವಾಗುತ್ತದೆ. ಭಯವನ್ನು ಅರ್ಥೈಸಿ ಸಾಹಸಕ್ಕೆ ಮುಂದಾದರೆ ಉತ್ತಮ ನಾಗರಿಕರಾಗಿ ಬೆಳೆಯಬಹುದು. ನಕಾರಾತ್ಮಕ ಚಿಂತನೆಗೆ ಜಾಗವಿಲ್ಲ. ಮನಸ್ಸು ಹತೋಟಿಯಲ್ಲಿ ಇದ್ದರೆ ದೈಹಿಕ ಶಕ್ತಿಯಿಂದ ಯಶಸ್ಸು ಖಚಿತ” ಎಂದು ಶೆಟ್ಟಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಅವರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. “ಸಂವಹನ ಕಲೆ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು” ಎಂಬ ಮಾತುಗಳಿಂದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸ್ವಚ್ಛತಾ ಸೇನಾನಿಗಳಿಗೆ ಪ್ರಮಾಣವಚನ ಬೋಧನೆಯನ್ನು ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ ನೆರವೇರಿಸಿದರು. ತರಗತಿ ಪ್ರತಿನಿಧಿಗಳಿಗೆ ಪ್ರಮಾಣವಚನ ಓದಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, 2024-25ನೇ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ 4ನೇ, ಜಿಲ್ಲೆಯಲ್ಲಿ 2ನೇ, ಹಾಗೂ ತಾಲೂಕು ಮತ್ತು ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ತುಷಾರ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ತರಗತಿ ಪ್ರತಿನಿಧಿ ಅಮೂಲ್ಯ ಪ್ರಭು ಸ್ವಾಗತಿಸಿದರು. ಸುಮಿತ್ ವಂದಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಹಂಸಿನಿ ಭಿಡೆ ಮತ್ತು ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿ ಧರೇಶ್ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

error: Content is protected !!