


ಧರ್ಮಸ್ಥಳ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ನೂರಾರು ಬೆಂಬಲಿಗರೊಂದಿಗೆ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಅದಕ್ಕೂ ಮೊದಲು ಗಂಗೆ, ತುಂಗೆ, ಕಾವೇರಿ, ನೇತ್ರಾವತಿ ನದಿಗಳಿಂದ ತಂದಿದ್ದ ಪವಿತ್ರ ನೀರನ್ನು ದೇವಳದ ಆವರಣದಲ್ಲಿ ಪ್ರೋಕ್ಷಣೆ ಮಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ, ಅನಾಮಿಕ ಪ್ರಕರಣದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಅನಾಮಿಕನ ಬಾಯಿ ಬಿಡಿಸಬೇಕೆಂದು ಅಂದೇ ನಾನು ಸಲಹೆ ನೀಡಿದ್ದೆ. ಅಂದು ಆ ರೀತಿ ನಡೆದುಕೊಂಡಿದ್ದರೆ ಇಷ್ಟೆಲ್ಲಾ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ದಿನದಿಂದ ದಿನಕ್ಕೆ ಅಪಪ್ರಚಾರ ನಡೆಯುತ್ತಿದೆ. ಅನಾಮಿಕನಿಗೆ ವಿದೇಶಗಳಿಂದ ಹಣ ಬರುತ್ತಿದೆ ಎಂಬ ಆರೋಪಗಳಿವೆ. ವಕೀಲರಿಗೆ ಯಾರು ಹಣ ಒದಗಿಸುತ್ತಿದ್ದಾರೆ ಎಂಬುದರ ಮೇಲೂ ತನಿಖೆ ನಡೆಯಬೇಕು” ಎಂದು ಅವರು ಒತ್ತಾಯಿಸಿದರು.
ಇದಲ್ಲದೆ, ಈ ಪ್ರಕರಣದಲ್ಲಿ ದೇಶದ್ರೋಹಿಯ ಸಂಚು ಅಡಗಿದೆ ಎಂಬುದನ್ನೂ ಈಶ್ವರಪ್ಪ ದೂರಿದರು. “ಎಸ್ಡಿಪಿಐ, ಸಮೀರ್ ಮೊದಲಾದವರ ಬೆಂಬಲವೂ ಇದೆ. ಸರಕಾರ ಕನಿಷ್ಠ ಮಧ್ಯಂತರ ವರದಿಯನ್ನಾದರೂ ಸಲ್ಲಿಸಬೇಕು. ಎಸ್ಐಟಿ ಮೂಲಕ ಎಲ್ಲಾ ಸತ್ಯ ಹೊರಬರುವುದಿಲ್ಲ. ಹೀಗಾಗಿ ಈ ಪ್ರಕರಣವನ್ನು ಎನ್ಐಎಗೆ ವಹಿಸಬೇಕು” ಎಂದು ಆಗ್ರಹಿಸಿದರು.
ರಾಜಕೀಯ ಲಾಭಕ್ಕಾಗಿ ತಾವು ಧರ್ಮಸ್ಥಳಕ್ಕೆ ಬಂದಿಲ್ಲವೆಂದು ಸ್ಪಷ್ಟಪಡಿಸಿದ ಈಶ್ವರಪ್ಪ, ಸತ್ಯಾಸತ್ಯತೆ ಬಯಲು ಮಾಡುವ ದೃಷ್ಟಿಯಿಂದ ತನಿಖೆ ಎನ್ಐಎ ಮಟ್ಟದಲ್ಲಿ ನಡೆಯುವುದು ಅವಶ್ಯಕ ಎಂದು ಪುನರುಚ್ಚರಿಸಿದರು.








