


ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಗೆ ಜಾತಿ ನಿಂದನೆಯ ಚ್ಯುತಿ ಬರುವಂತೆ ಸಂದೇಶ ರವಾನಿಸಿದ ಆಪಾದಿತನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಅ.18ರಂದು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ.146/2025, ಕಲಂ 79, 190 ಬಿ.ಎನ್.ಎಸ್., 66(ಎ), 67 ಐಟಿ ಕಾಯ್ದೆ ಹಾಗೂ 3(1)(w)(i)(ii) ಎಸ್.ಸಿ/ಎಸ್.ಟಿ. ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು.
ಪ್ರಕರಣದಲ್ಲಿ ಕಾರ್ಕಳ ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ ಎಂಬಾತನು ದೂರುದಾರರನ್ನು ಬೆದರಿಸಿ ಅವರ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಲ್ಲದೆ, ಆತ ಆತ್ಮಹತ್ಯೆ ಮಾಡಲು ಮುನ್ನ ನೇಣು ಹಾಕಿರುವ ಫೋಟೋಗಳನ್ನು ದೂರುದಾರರಿಗೆ ಕಳುಹಿಸಿದ್ದ. ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನ ತಮ್ಮ ಅಭಿಜಿತ್ ಆಚಾರ್ಯ ಹಾಗೂ ಇತರರು, ಅಭಿಷೇಕ್ ಬರೆದಿದ್ದ ಡೆತ್ ನೋಟ್ ಮತ್ತು ದೂರುದಾರರ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ — ಯೂಟ್ಯೂಬ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್ ಗ್ರೂಪ್‌ಗಳಲ್ಲಿ ವೈರಲ್ ಮಾಡಿ ದೂರುದಾರರ ತೇಜೋವಧೆ ಮಾಡಿ ಮಾನಸಿಕ ಹಿಂಸೆ ನೀಡಿರುವುದಾಗಿ ದೂರು ದಾಖಲಾಗಿದೆ.
ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದ್ದು, ಅಶ್ಲೀಲ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚುವ ಮೂಲಕ ಜಾತಿ ನಿಂದನೆಯ ಚ್ಯುತಿ ಬರುವಂತೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತನಿಖೆಯ ವೇಳೆ, ಸಾಮಾಜಿಕ ಜಾಲತಾಣದಲ್ಲಿ ರವಾನಿಸಿದ ಸಂದೇಶಗಳಲ್ಲಿ ಜಾತಿ ನಿಂದನೆಯ ಶಬ್ದಗಳ ಸಾಕ್ಷ್ಯ ದೊರೆತ ಹಿನ್ನೆಲೆಯಲ್ಲಿ, ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರ ನೇತೃತ್ವದಲ್ಲಿ ಆರೋಪಿಯಾದ ಮಂಗಳೂರು ಆಕಾಶಭವನ, ಕಾಪಿಗುಡ್ಡ ನಿಖಿಲ್ ರಾಜ್ (27) ಎಂಬಾತನನ್ನು ಅ.21ರಂದು ದಸ್ತಗಿರಿ ಮಾಡಲಾಗಿದೆ.
ತನಿಖೆ ವೇಳೆ ಆರೋಪಿಯ ಬಳಕೆಯಲ್ಲಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಸದರಿ ಪ್ರಕರಣವು ಎಸ್.ಸಿ/ಎಸ್.ಟಿ ಕಾಯ್ದೆಯಡಿಯಲ್ಲಿ ದಾಖಲಾಗಿದ್ದು, ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು.ಮಂಗಳೂರು ನಗರ ಪೊಲೀಸ್ ಆಯುಕ್ತರವರು ತಿಳಿಸಿದ್ದಾರೆ.






