ಕೃಷಿನಾಶ ನಾಶ, ಗಾಯಗೊಂಡ ಆನೆ ಇರುವ ಶಂಕೆ


ಕೊಕ್ಕಡ : ಕಳೆದ ಹಲವು ದಿನಗಳಿಂದ ಶಿಶಿಲ ಪ್ರದೇಶದ ಮಲೆಕುಡಿಯ ಕಾಲೋನಿಯಲ್ಲಿ ಕಾಡಾನೆಗಳ ತಂಡ ಬೀಡು ಬಿಟ್ಟಿದ್ದು, ಸುತ್ತಮುತ್ತಲಿನ ತೋಟಗಳಿಗೆ ನಿರಂತರವಾಗಿ ದಾಳಿ ನಡೆಸುತ್ತಿರುವುದರಿಂದ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿದೆ. ಕಾಡಾನೆಗಳ ಉಪಟಳದಿಂದ ಅಡಿಕೆ, ತೆಂಗು, ಬಾಳೆ ಸೇರಿದಂತೆ ಹಲವು ಉಪಬೆಳೆಗಳು ಸಂಪೂರ್ಣವಾಗಿ ನಾಶಗೊಂಡಿವೆ.
ಡಿ.15ರ ರಾತ್ರಿ ಎಂದಿನಂತೆ ಕಾಡಾನೆಗಳು ತೋಟಕ್ಕೆ ನುಗ್ಗಿ ಭಾರೀ ಹಾನಿ ಉಂಟುಮಾಡಿವೆ. ಈ ಸಂದರ್ಭ ಆನೆಗಳ ಹೆಜ್ಜೆಗುರುತುಗಳ ಬಳಿ ರಕ್ತದ ಗುರುತು ಹಾಗೂ ಹುಳಗಳು ಕಂಡುಬಂದಿದ್ದು, ತಂಡದಲ್ಲಿರುವ ಆನೆಯೊಂದಕ್ಕೆ ಗಾಯವಾಗಿರಬಹುದೆಂಬ ಗಂಭೀರ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಕುರಿತು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಡಿ.16ರ ಮುಂಜಾನೆ ಅರಣ್ಯ ಗಸ್ತು ಪಾಲಕ ಸಚಿನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆಯ ಬಗ್ಗೆ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಬೆಳಗಿನ ಹೊತ್ತಿನಲ್ಲಿ ಆನೆಗಳ ಚಲನೆ ಹಾಗೂ ಗಾಯದ ಸ್ಥಿತಿಯನ್ನು ಸ್ಪಷ್ಟವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲದ ಕಾರಣ, ರಾತ್ರಿ ವೇಳೆಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಡಾನೆಗಳ ನಿರಂತರ ದಾಳಿಯಿಂದ ಬೆಳೆ ನಾಶವಾಗುತ್ತಿದ್ದು, ಯಾವುದೇ ಸಮಯದಲ್ಲಾದರೂ ಮಾನವ ಜೀವಕ್ಕೂ ಅಪಾಯ ಸಂಭವಿಸಬಹುದೆಂಬ ಭೀತಿಯಲ್ಲಿ ಮಲೆಕುಡಿಯ ಕಾಲೋನಿಯ ನಿವಾಸಿಗಳು ಬದುಕುತ್ತಿದ್ದಾರೆ. ಶಾಶ್ವತ ಪರಿಹಾರಕ್ಕಾಗಿ ಕಾಡಾನೆಗಳ ಚಲನೆ ನಿಯಂತ್ರಣ, ಬೆಳೆ ನಷ್ಟಕ್ಕೆ ಪರಿಹಾರ ಹಾಗೂ ಭದ್ರತಾ ಕ್ರಮಗಳನ್ನು ತಕ್ಷಣ ಜಾರಿಗೊಳಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.






