ತಾಳ್ಮೆಯೇ ಮನುಷ್ಯ ಜೀವನದ ಮೂಲಾಧಾರ: ವಂ.ಬಿಷಪ್ ಡಾ.ಯಾಹಾನೋನ್ ಮಾರ್ ಕ್ರಿಸೋಸ್ಟಮೋಸ್

ಶೇರ್ ಮಾಡಿ

ಸಂಪ್ಯಾಡಿ ಸೈಂಟ್ ಮೇರೀಸ್ ಓರ್ತಡೋಕ್ಸ್ ಸಿರಿಯನ್ ಚರ್ಚ್ ವಾರ್ಷಿಕ ಹಬ್ಬ ಆಚರಣೆ

ನೆಲ್ಯಾಡಿ: ಇಂದಿನ ವೇಗದ ಜೀವನ ಶೈಲಿಯಲ್ಲಿ ಮಾನವೀಯ ಮೌಲ್ಯಗಳು ನಿಧಾನವಾಗಿ ಕುಗ್ಗುತ್ತಿವೆ. ಇಂತಹ ಸಂದರ್ಭದಲ್ಲಿ ತಾಳ್ಮೆ, ಕ್ಷಮೆ ಮತ್ತು ಸಹನಶೀಲತೆ ಎಂಬ ಗುಣಗಳು ಮನುಷ್ಯನ ಜೀವನಕ್ಕೆ ದಿಕ್ಕು ತೋರಿಸುತ್ತವೆ. ಯೇಸು ಕ್ರಿಸ್ತರ ಮತ್ತು ಮೇರಿ ಮಾತೆಯವರ ಜೀವನವೇ ತಾಳ್ಮೆ ಮತ್ತು ತ್ಯಾಗದ ಅತ್ಯುತ್ತಮ ಮಾದರಿ. ಅವರ ಉಪದೇಶಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುತ್ತದೆ ಎಂದು ಬಿಷಪ್ ವಂ.ಬಿಷಪ್ ಡಾ.ಯಾಹಾನೋನ್ ಮಾರ್ ಕ್ರಿಸೋಸ್ಟಮೋಸ್ ಅಭಿಪ್ರಾಯಪಟ್ಟರು.

ಸಂಪ್ಯಾಡಿ ಸೈಂಟ್ ಮೇರೀಸ್ ಓರ್ತಡೋಕ್ಸ್ ಸಿರಿಯನ್ ಚರ್ಚ್z ವಾರ್ಷಿಕ ಹಬ್ಬ ಹಾಗೂ ಆದ್ಯಫಲ ಸಂಗ್ರಹಣೆ ಪ್ರತೀ ವರ್ಷದಂತೆ ಜ.14 ಹಾಗು 15ರಂದು ಬಿಷಪ್ ಅವರ ಮುಂದಾಳತ್ವದಲ್ಲಿ ಸಂಭ್ರಮದ ದಿವ್ಯ ಬಲಿಪೂಜೆ, ವಿಶೇಷ ಪ್ರಾರ್ಥನಾ ವಿಧಿಗಳು, ಧಾರ್ಮಿಕ ವಿಧಿವಿಧಾನಗಳು ಹಾಗೂ ಭಕ್ತಿಗೀತೆಗಳು, ಅಧ್ಯಫಲ ಹರಾಜು ಹಾಗು ಇತರ ಹರಕೆ ನೇರವೇರಿಸಿ ಮಾತನಾಡಿದರು.

ಭಕ್ತಾದಿಗಳಿಗೆ ಆಶೀರ್ವಾದ ನೀಡುತ್ತಾ ಬಿಷಪ್ ಅವರು ಕುಟುಂಬ ಜೀವನದಲ್ಲಾಗಲಿ, ಸಾಮಾಜಿಕ ಬದುಕಿನಲ್ಲಾಗಲಿ ತಾಳ್ಮೆಯು ಅತ್ಯಂತ ಅಗತ್ಯವಾದ ಗುಣವಾಗಿದೆ. ಕ್ಷಣಿಕ ಕೋಪ ಮತ್ತು ಆತುರದಿಂದ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂದು ಎಚ್ಚರಿಸಿದರು. ಚರ್ಚಿನ ವಾರ್ಷಿಕ ಹಬ್ಬವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಮನುಷ್ಯನೊಳಗಿನ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಒಂದು ಮಹತ್ವದ ಅವಕಾಶವಾಗಿದ್ದು, ಇಂತಹ ಹಬ್ಬಗಳು ಸಮಾಜದಲ್ಲಿ ಏಕತೆ, ಪರಸ್ಪರ ಗೌರವ ಮತ್ತು ಪ್ರೀತಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಬಹುಮುಖ ಪ್ರತಿಭೆ ಅರ್ಚನಾ ಅವರಿಗೆ ಬಿಷಪ್ ಶಾಲು ಹೊದಿಸಿ ಸ್ಮರಣಿಕೆ ನೀಡಿ “ಮರಿಯನ್ ಎಕ್ಸಲೆನ್ಸಿ” ಪುರಸ್ಕಾರ ನೀಡಿ ಗೌರವಿಸಿದರು.

ಚರ್ಚ್‌ನ ಧರ್ಮಗುರು ಫಾ.ವಿ.ಸಿ.ಜೋಸ್ ಚೆಮ್ಮನಂ, ಕನ್ವೀನರ್ ಕುರಿಯಾಕೋಸ್ ಸಿ.ಜೆ, ಕಾರ್ಯದರ್ಶಿ ಜೈಮಿ ಜೇಕಬ್, ಟ್ರಸ್ಟಿ ರಾಜು ತಾನಿಕ್ಕಾಕುಯಿ, ಹಬ್ಬದ ಮುಂದಾಳತ್ವ ವಹಿಸಿದ್ದ ಅರಸಿನಮಕ್ಕಿ ಪ್ರಿಯ ಪ್ರೆಸ್ ಚಿಕನ್ ಸೆಂಟರ್ ಮಾಲಕ ಟೈಟಸ್ ಪಿ.ವಿ ಮತ್ತು ಕುಟುಂಬದವರು ಹಾಗೂ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಭಕ್ತಾದಿಗಳು ಮತ್ತು ಸ್ಥಳೀಯ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!