ಶಿಶಿಲದಲ್ಲಿ ವಿಷಸರ್ಪಗಳ ದಾಳಿಗೆ ಎರಡನೇ ಬಲಿ – ಕಾರೆಗುಡ್ಡೆಯ ಚೋಮ ನಿಧನ; ಗ್ರಾಮದಲ್ಲಿ ಆತಂಕದ ವಾತಾವರಣ

ಶೇರ್ ಮಾಡಿ
ಶಿಶಿಲದಲ್ಲಿ ವಿಷಸರ್ಪಗಳ ದಾಳಿಗೆ ಎರಡನೇ ಬಲಿ – ಕಾರೆಗುಡ್ಡೆಯ ಚೋಮ ನಿಧನ; ಗ್ರಾಮದಲ್ಲಿ ಆತಂಕದ ವಾತಾವರಣ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ವಿಷಸರ್ಪಗಳ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದ್ದು, ಹಾವು ಕಡಿತದಿಂದ ಕಾರೆಗುಡ್ಡೆ ನಿವಾಸಿ ಚೋಮ (67) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆ ಗ್ರಾಮದಲ್ಲಿ ಭೀತಿಯ ವಾತಾವರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಮಾ.3ರಂದು ಚೋಮ ಅವರು ತಮ್ಮ ತೋಟದಲ್ಲಿ ಬಾಳೆ ಗಿಡಗಳಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವು ಕಡಿದಿತ್ತು. ತಕ್ಷಣವೇ ಅವರನ್ನು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಾ.8ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

ಶಿಶಿಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ವಿಷಸರ್ಪಗಳ ಓಡಾಟ ಹೆಚ್ಚಾಗುತ್ತಿರುವುದು ಸ್ಥಳೀಯರನ್ನು ಆತಂಕಕ್ಕೆ ದೂಡಿದೆ. ಕೆಲವೊಮ್ಮೆ ಮನೆ ಬಾಗಿಲಿನವರೆಗೂ ಹಾವುಗಳು ಬರುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಜನರು ರಾತ್ರಿ ಸಮಯದಲ್ಲಿ ಹೊರಗೆ ಹೋಗಲು ಕೂಡ ಭಯಪಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ನಾಗರಹಾವು ಕಚ್ಚಿದ ಘಟನೆಗಳು ನಡೆದಿವೆ. ಈ ಪೈಕಿ ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸುಮಾರು ತಿಂಗಳ ಹಿಂದೆ ಮೃತಪಟ್ಟಿದ್ದರು. ಇನ್ನೊಬ್ಬ ಪುರುಷ ಮಂಗಳೂರಿನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಪಕ್ಕದ ಶಿಬಾಜೆ ಗ್ರಾಮದಲ್ಲಿಯೂ ಇದೇ ರೀತಿಯ ಘಟನೆಯೊಂದು ಸಂಭವಿಸಿ ಆ ವ್ಯಕ್ತಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಚೋಮ ಅವರ ಸಾವಿನಿಂದ ಗ್ರಾಮದಲ್ಲಿ ವಿಷಸರ್ಪಗಳ ಭೀತಿ ಮತ್ತಷ್ಟು ಹೆಚ್ಚಾಗಿದೆ. ಮೃತರು ಪತ್ನಿ ಲಲಿತ, ಪುತ್ರಿ ಅಶ್ವಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

error: Content is protected !!