ಕಳೆಂಜ: ಸರ್ವೇ ನಂ.309 ಸಂತ್ರಸ್ತರಿಗೆ ಶಾಸಕರ ಭರವಸೆ: ನೋಟಿಸ್ ವಿರುದ್ಧ ಆಕ್ರೋಶ, ಸ್ಟೇ ಆರ್ಡರ್‌ಗೆ ನಿರ್ಧಾರ

ಶೇರ್ ಮಾಡಿ
ಸರ್ವೇ ನಂ.309 ಸಂತ್ರಸ್ತರಿಗೆ ಶಾಸಕರ ಭರವಸೆ

ಕೊಕ್ಕಡ: ಕಳೆಂಜ ಸರ್ವೇ ನಂ.309ರ ಭೂ ವಿವಾದದ ಹಿನ್ನೆಲೆ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಮಾ.22ರಂದು ಇಲ್ಲಿನ ಸರಕಾರಿ ಶಾಲಾ ವಠಾರದಲ್ಲಿ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಅರಣ್ಯ ಇಲಾಖೆಯಿಂದ ಜಾರಿ ಮಾಡಲಾಗುತ್ತಿರುವ ತೆರವು ನೋಟಿಸ್‌ಗಳ ವಿರುದ್ಧ ಸಂತ್ರಸ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆಯ ಹಕ್ಕುಚ್ಯುತಿ ಸಮಿತಿಯ ಆದೇಶದಂತೆ ಶಾಸಕರ ಸಮ್ಮುಖದಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಸರ್ವೇಯರ್‌ಗಳು ಹಾಗೂ ಸಂತ್ರಸ್ತರು ಜಂಟಿಯಾಗಿ ನಡೆಸುತ್ತಿರುವ ಸರ್ವೇ ಕಾರ್ಯ ಕೇವಲ ಶೇಕಡಾ 10ರಷ್ಟೇ ಪೂರ್ಣಗೊಂಡಿದ್ದು, ಇನ್ನೂ ಸಂಪೂರ್ಣ ಸರ್ವೇ ಬಾಕಿಯಿದೆ ಎಂದು ಸಂತ್ರಸ್ತರು ತಿಳಿಸಿದರು. ದಟ್ಟ ಅರಣ್ಯ ಪ್ರದೇಶವಾದ ಶಿಶಿಲ ಭಾಗದಲ್ಲಿ ಸರ್ವೇ ಕಾರ್ಯ ನಡೆಯುತ್ತಿರುವುದರಿಂದ ಪೊದೆಗಳು ಅಡ್ಡಿಯಾಗುತ್ತಿದ್ದು, ಅವನ್ನು ಸಂತ್ರಸ್ತರೇ ತೆರವುಗೊಳಿಸಬೇಕೆಂದು ಅರಣ್ಯ ಇಲಾಖೆ ಒತ್ತಾಯಿಸುತ್ತಿರುವುದಾಗಿ ಅವರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಹರೀಶ ಪೂಂಜಾ, “ಪೊದೆಗಳನ್ನು ಯಾವುದೇ ಕಾರಣಕ್ಕೂ ಸಂತ್ರಸ್ತರು ತೆರವುಗೊಳಿಸಬಾರದು. ಅದು ಇಲಾಖೆಯ ಜವಾಬ್ದಾರಿ,” ಎಂದು ಸ್ಪಷ್ಟ ಸೂಚನೆ ನೀಡಿದರು. ಪೊದೆ ತೆರವು ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಸರ್ವೇ ಕಾರ್ಯ ಸ್ಥಗಿತಗೊಂಡಿದ್ದು, ಶಿವಮೊಗ್ಗ ವರ್ಕಿಂಗ್ ಪ್ಲಾನ್ ಸರ್ವೇಯರ್‌ಗಳು ಸಹ ಭಾಗವಹಿಸುವುದನ್ನು ನಿಲ್ಲಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಡ್ರೋನ್ ಮತ್ತು ರೋವರ್ ಉಪಕರಣಗಳಿಂದ ಸರ್ವೇ ನಡೆಸುವುದರಿಂದ ನಿಖರತೆ ಇಲ್ಲವೆಂದು ಸಂತ್ರಸ್ತರು ಆಕ್ಷೇಪ ವ್ಯಕ್ತಪಡಿಸಿ, ಚೈನ್ ಮೂಲಕವೇ ಸರ್ವೇ ನಡೆಸಬೇಕೆಂದು ಒತ್ತಾಯಿಸಿದರು. ಈಗಾಗಲೇ ನಡೆದಿರುವ ಭಾಗಶಃ ಸರ್ವೇಯಲ್ಲಿ 80 ಎಕರೆಗಿಂತ ಹೆಚ್ಚು ಹೆಚ್ಚುವರಿ ಕಂದಾಯ ಭೂಮಿ ಇರುವ ಸಾಧ್ಯತೆ ಕಂಡುಬಂದಿದ್ದು, ಪೂರ್ಣ ಪ್ರಮಾಣದಲ್ಲಿ ಸರ್ವೇ ನಡೆದರೆ 1000 ಎಕರೆಗೂ ಹೆಚ್ಚು ಭೂಮಿ ಸಿಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ರೆಖ್ಯ ಭಾಗದಲ್ಲಿ ಸುಮಾರು 700 ಎಕರೆ ಹೆಚ್ಚುವರಿ ಭೂಮಿ ಪತ್ತೆಯಾಗಿರುವುದಾಗಿ ಶಾಸಕ ಪೂಂಜಾ ತಿಳಿಸಿ, ಅದರ ಪ್ರತ್ಯೇಕ ನಕ್ಷೆ ಸಿದ್ಧಪಡಿಸಿ ಅರಣ್ಯ ಸಚಿವರಿಗೆ ಸಲ್ಲಿಸಲಾಗಿದೆ. ಆದರೆ, ಸಚಿವರು ಸಹಿ ಮಾಡಲು ಹಿಂದೇಟು ಹಾಕುತ್ತಿರುವುದಾಗಿ ಅವರು ಆರೋಪಿಸಿದರು. ಇದೇ ವೇಳೆ, ಕುಂಟ್ಯಾನ ಮನೆ ಕೃಷ್ಣಪ್ಪ ಗೌಡರಿಗೆ ನೀಡಿರುವ ತೆರವು ನೋಟಿಸ್ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಸಂತ್ರಸ್ತರ ಪರವಾಗಿ ಹೈಕೋರ್ಟ್ ಮೂಲಕ ತಡೆಯಾಜ್ಞೆ ತರಲು ನಿರ್ಧಾರ ಕೈಗೊಳ್ಳಲಾಗಿದ್ದು, ಜಂಟಿ ಸರ್ವೇ ಪೂರ್ಣಗೊಳ್ಳುವವರೆಗೆ ಯಾವುದೇ ನೋಟಿಸ್ ಜಾರಿಗೊಳಿಸಬಾರದು ಎಂಬುದಾಗಿ ಒಮ್ಮತ ವ್ಯಕ್ತವಾಯಿತು.

ಸುಮಾರು 75 ವರ್ಷಗಳಿಂದ ನಾವು ಈ ಭೂಮಿಯಲ್ಲಿ ಬದುಕುತ್ತಿದ್ದೇವೆ. ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ನಮ್ಮ ತೋಟ, ಮನೆ, ಕೆರೆ ಎಲ್ಲವೂ ಇಲ್ಲೇ ಇದೆ. ಒಂದು ವೇಳೆ ತೆರವು ಮಾಡಲು ಬಂದರೆ ಪ್ರಾಣ ತ್ಯಾಗಕ್ಕೂ ಸಿದ್ಧ.
-ಚೀಂಕ್ರ ಗೌಡ, ಸಂತ್ರಸ್ತರು

ಜಂಟಿ ಸರ್ವೇ ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲೇ ನೋಟಿಸ್ ನೀಡುತ್ತಿರುವುದು ಅರ್ಥವಾಗುತ್ತಿಲ್ಲ. ಹೈಕೋರ್ಟ್ ಮೂಲಕ ತಡೆಯಾಜ್ಞೆ ತರಲು ಕ್ರಮ ಕೈಗೊಂಡಿದ್ದೇವೆ.
-ಕೃಷ್ಣಪ್ಪ ಗೌಡ ಸಂತ್ರಸ್ತ ಚೀಂಕ್ರ ಗೌಡರ ಮಗ

ಅರಣ್ಯ ಇಲಾಖೆ ನೋಟಿಸ್ ನೀಡಿ ಗೊಂದಲ ಸೃಷ್ಟಿಸುತ್ತಿದೆ. ಒಂದು ವೇಳೆ ತೆರವು ಮಾಡಲು ಬಂದರೆ ಊರೇ ಸೇರಿ ತಡೆಯುತ್ತೇವೆ. ನಮ್ಮ ಪ್ರಾಣ ಹೋದರೂ ಪರವಾಗಿಲ್ಲ.
–ರಾಜೇಶ್ ನಿಡ್ಡಾಜೆ, ಗ್ರಾಮಸ್ಥರು.

ಹಕ್ಕುಚ್ಯುತಿ ಸಮಿತಿಯ ಆದೇಶದಂತೆ ಚೈನ್ ಮೂಲಕವೇ ಸರ್ವೇ ನಡೆಯಬೇಕು. ಸಂತ್ರಸ್ತರು ಗೊಂದಲಕ್ಕೊಳಗಾಗಬೇಡಿ. ನಿಮ್ಮ ಜಮೀನು ಉಳಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಯಾವುದೇ ರಾಜಕೀಯ ಮಾತುಗಳಿಗೆ ಕಿವಿಗೊಡಬೇಡಿ, ನ್ಯಾಯ ನಿಮಗೆ ಸಿಗುವ ವಿಶ್ವಾಸ ಇದೆ. ಹೆಚ್ಚುವರಿ ಭೂಮಿ ಸಿಕ್ಕಿಯೇ ಸಿಗುತ್ತದೆ.
-ಹರೀಶ ಪೂಂಜಾ, ಶಾಸಕರು.

Leave a Reply

error: Content is protected !!