





ಕೊಕ್ಕಡ: ಶೈಕ್ಷಣಿಕ ಸಂಶೋಧನೆ ಹಾಗೂ ಸಂಶೋಧನಾ ಲೇಖನಗಳ ಪ್ರಸ್ತುತೀಕರಣ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮೆರೆದ ಕುಮಾರಿ ಸೌಖ್ಯ ಅವರನ್ನು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಆಡಳಿತ ಬಂಡಳ್ಳಿ, ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಧರ್ಮಸ್ಥಳದ ಸುರೇಂದ್ರ ಶೆಟ್ಟಿ ಮತ್ತು ಸೌಮ್ಯ ದಂಪತಿಗಳ ಸುಪುತ್ರಿಯಾದ ಕುಮಾರಿ ಸೌಖ್ಯ ಅವರು ವಿವಿಧ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಆರು ಸಂಶೋಧನಾ ಲೇಖನಗಳನ್ನು ಯಶಸ್ವಿಯಾಗಿ ಮಂಡಿಸಿ ಗಮನ ಸೆಳೆದಿದ್ದಾರೆ. ತಮ್ಮ ಅಸಾಮಾನ್ಯ ಪ್ರತಿಭೆ ಮತ್ತು ಶ್ರಮದ ಮೂಲಕ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾನ್ಯತೆ ಪಡೆದು, “ಇಂಡಿಯಾ ಬುಕ್ ಆಫ್ ರೆಕಾರ್ಡ್ ಅಚೀವರ್” ಎಂಬ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಅಪೂರ್ವ ಸಾಧನೆಗೆ ಗುರುತಾಗಿ ನಡೆದ ಸನ್ಮಾನ ಸಮಾರಂಭದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳತ್ತ ಸಾಗುವಂತೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ.ಜಯಕೀರ್ತಿ ಜೈನ್, ಯುವರಾಜ ಪೂವಣಿ, ಫಣಿರಾಜ್ ಜೈನ್, ಸಂಪತ್ ಕುಮಾರ್, ಅತಿಶಯ ಜೈನ್, ಪ್ರದೀಶ್ ಜೈನ್, ಸಮಿತ್ ಜೈನ್, ಶೇಖರ್ ಜೈನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.





