ಕೊಕ್ಕಡ: ವಿದ್ಯಾರ್ಥಿನಿ, ಬೈಕ್ ಸವಾರನಿಗೆ ರಸ್ತೆಯಲ್ಲಿ ಹಠಾತ್ ಎದುರಾದ ಕಾಡಾನೆ – ಅರಣ್ಯ ಇಲಾಖೆಯಿಂದ ಗಸ್ತು

ಶೇರ್ ಮಾಡಿ

ಕೊಕ್ಕಡ: ಪಟ್ಟೂರಿನಿಂದ ಸೌತಡ್ಕ ಕಡೆಗೆ ಸಾಗುವ ವಸರಿಕಟ್ಟೆ ಎಂಬಲ್ಲಿ ಕಾಲೇಜಿನಿಂದ ಬಸ್‌ನಲ್ಲಿ ಇಳಿದು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಹಾಗೂ ಬೈಕ್‌ ಸವಾರನಿಗೆ ರಸ್ತೆಯಲ್ಲಿ ಹಠಾತ್ ಕಾಡಾನೆ ಎದುರಾದ ಘಟನೆ ಮಾ.23ರಂದು ಸಂಜೆ ಸುಮಾರು 6.30ರ ವೇಳೆಗೆ ನಡೆದಿದೆ.

ಹಠಾತ್ ಎದುರಾದ ಕಾಡಾನೆಯಿಂದ ಆತಂಕಗೊಂಡ ವಿದ್ಯಾರ್ಥಿನಿ ಹಾಗೂ ಬೈಕ್ ಸವಾರರು ಕೆಲಕಾಲ ಭೀತಿಗೊಳಗಾಗಿದ್ದು, ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಬಳಿಕ ಪ್ರದೇಶದಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ವಲಯದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರಿಗೆ ಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದ್ದು, ವಿಶೇಷವಾಗಿ ಆ ರಸ್ತೆಯಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ. ಗ್ರಾಮಸ್ಥರ ಮಾಹಿತಿಯ ಪ್ರಕಾರ, ಕಳೆದ 2-3 ದಿನಗಳಿಂದ ಇದೇ ಪ್ರದೇಶದಲ್ಲಿ ಕಾಡಾನೆ ಸಂಚರಿಸುತ್ತಿರುವುದು ಕಂಡುಬಂದಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ಹೆಚ್ಚಿಸಿ ಆನೆಯ ಚಲನವಲನವನ್ನು ನಿಗಾದಲ್ಲಿ ಇಡುತ್ತಿದ್ದಾರೆ.

Leave a Reply

error: Content is protected !!