ನಿಡ್ಲೆ ಪ್ರೌಢಶಾಲೆಗೆ ಎರಡು ನೂತನ ಕೊಠಡಿಗಳ ಹಸ್ತಾಂತರ – ಉಚಿತ ನೇತ್ರ ತಪಾಸಣಾ ಶಿಬಿರ

ಶೇರ್ ಮಾಡಿ

 

ಪಿಪಿಎಲ್ ಸಹಕಾರದಲ್ಲಿ ನಿಡ್ಲೆ ಪ್ರೌಢಶಾಲೆಗೆ ಎರಡು ನೂತನ ಕೊಠಡಿಗಳ ಹಸ್ತಾಂತರ – ಉಚಿತ ನೇತ್ರ ತಪಾಸಣಾ ಶಿಬಿರ

ಕೊಕ್ಕಡ: ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್ (ಪಿಪಿಎಲ್) ಮಂಗಳೂರು ಸಂಸ್ಥೆ ವತಿಯಿಂದ ನಿರ್ಮಿಸಲಾದ ಎರಡು ನೂತನ ಶಾಲಾ ಕೊಠಡಿಗಳ ಹಸ್ತಾಂತರ ಕಾರ್ಯಕ್ರಮ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರವು ಮಾ.29ರಂದು ಸರ್ಕಾರಿ ಪ್ರೌಢಶಾಲೆ ನಿಡ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಪಿಪಿಎಲ್ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿಸಲಾದ ಶಾಲಾ ಕೊಠಡಿಗಳನ್ನು ಪಿಪಿಎಲ್ ಮುಖ್ಯ ಉತ್ಪದನಾ ಅಧಿಕಾರಿ ಎಸ್.ಗಿರೀಶ್ ಅವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಮರ್ಪಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಸೇಲ್) ಆರ್‌ಎಸ್‌ಪಿ ಘಟಕದ ನಿವೃತ್ತ ಜನರಲ್ ಮ್ಯಾನೇಜರ್ ಹಾಗೂ ಹಳೆ ವಿದ್ಯಾರ್ಥಿ ಉಮೇಶ ರಾವ್ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಗಿರೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನ ಹೆಚ್‌ಒಡಿ ಹೃಷಿಕೇಶ್ ಅಮೀನ್, ಉಜಿರೆ ಬೆನಕ ಹೆಲ್ತ್ ಸೆಂಟರ್‌ನ ಆಡಳಿತ ನಿರ್ದೇಶಕ ಹಾಗೂ ಹಳೆ ವಿದ್ಯಾರ್ಥಿ ಡಾ| ಗೋಪಾಲಕೃಷ್ಣ ಕೆ., ಸ್ವಾಮಿ ಪ್ರಸಾದ್ ಕನ್ಸ್ಟ್ರಕ್ಷನ್‌ನ ಗಿರೀಶ್ ಕುಮಾರ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್ ಎಲ್., ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ, ಹಳೆ ವಿದ್ಯಾರ್ಥಿಗಳ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ನಿವೃತ್ತ ಮುಖ್ಯಶಿಕ್ಷಕ ರಾಜಗುರು ಹೆಬ್ಬಾರ್, ನಿವೃತ್ತ ಮುಖ್ಯಶಿಕ್ಷಕಿ ಶಾಂತ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಪಿಪಿಎಲ್ ಮುಖ್ಯ ಉತ್ಪದನಾ ಅಧಿಕಾರಿ ಎಸ್. ಗಿರೀಶ್, ಚಾರಿಟೇಬಲ್ ಆಸ್ಪತ್ರೆಯ ಜಂಟಿ ಪ್ರಧಾನ ವ್ಯವಸ್ಥಾಪಕ ಡಾ| ಯೋಗೀಶ್, ಪಿಪಿಎಲ್‌ನ ಸಹಾಯಕ ವ್ಯವಸ್ಥಾಪಕ ಹಾಗೂ ಹಳೆ ವಿದ್ಯಾರ್ಥಿ ರಾಕೇಶ್ ಎಂ. ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಡಾ|ಗೋಪಾಲಕೃಷ್ಣ ಕೆ.ಅವರು ಶಾಲಾ ಕೊಠಡಿ ನಿರ್ಮಾಣಕ್ಕೆ ರೂ.1 ಲಕ್ಷ ದೇಣಿಗೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಮಂಗಳೂರು, ಸರಕಾರಿ ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿಗಳ ಸೇವಾ ಟ್ರಸ್ಟ್ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದರು.

ಪಿಪಿಎಲ್ ಸಂಸ್ಥೆಯ ವಿವೇಕ್ ಕೋಟ್ಯಾನ್, ಸುಭಾಷ್, ರವೀಂದ್ರ, ಆದಿತ್ಯ, ಜಗದೀಶ್, ಅಶೋಕ್ ಪ್ರಭು, ಮನೋಜ್ ಪಾಟೀಲ್ ಸೇರಿದಂತೆ ಅನೇಕರು, ಹಳೆ ವಿದ್ಯಾರ್ಥಿ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಕೃಷ್ಣಪ್ರಸಾದ್, ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಭಾರ ಮುಖ್ಯಶಿಕ್ಷಕ ಶರತ್ ಕುಮಾರ್ ಎಂ. ಸ್ವಾಗತಿಸಿದರು. ಶಿಕ್ಷಕಿ ಶೋಲಿ ವಿ.ಜೆ. ನಿರೂಪಿಸಿದರು. ರಾಜಗುರು ಹೆಬ್ಬಾರ್ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ರಾಸಾಯನಿಕ ಉತ್ಪನ್ನಗಳ ಪ್ರಾತ್ಯಕ್ಷಿಕೆ ಕೂಡ ಜರುಗಿದ್ದು, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಒದಗಿಸಲಾಯಿತು.

 

Leave a Reply

error: Content is protected !!