





ಬೆಳ್ತಂಗಡಿ: ತಾಲೂಕಿನ ಕಸಬಾ ಗ್ರಾಮದ ಕೆಇಬಿ ರಸ್ತೆಯಲ್ಲಿರುವ “ಪವನ್” ಹೆಸರಿನ ಕ್ಯಾಂಟಿನ್‌ನಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡ ಘಟನೆ ಭಾನುವಾರದಂದು ಸಂಜೆ ನಡೆದಿದೆ.
ಕ್ಯಾಂಟಿನ್ ನಡೆಸುತ್ತಿದ್ದ ಸುಂದರ್ ಶೆಟ್ಟಿ ಹಾಗೂ ಅವರ ಪರಿಚಯದ ಉಸ್ಮಾನ್ ಎಂಬವರು ಸೇರಿಕೊಂಡು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಕ್ಯಾಂಟಿನ್‌ನ ಒಳಭಾಗದ ಕೋಣೆಯಲ್ಲಿ ಮಹಿಳೆಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಮಾಹಿತಿ ಬೆಳ್ತಂಗಡಿ ಪೊಲೀಸ್ ಠಾಣೆಯ ತನಿಖಾ ಉಪನಿರೀಕ್ಷಕ ಸಿಕಂದರ್ ಪಾಷಾ ಅವರಿಗೆ ಲಭಿಸಿತ್ತು.
ಮಾಹಿತಿ ಆಧರಿಸಿ ಪೊಲೀಸರು ಗುಪ್ತವಾಗಿ ಪರಿಶೀಲನೆ ನಡೆಸಿದಾಗ ಸದ್ರಿ ಸ್ಥಳದಲ್ಲಿ ಅಕ್ರಮ ವೇಶ್ಯಾವಾಟಿಕೆ ಕೃತ್ಯ ನಡೆಯುತ್ತಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಭಾನುವಾರದಂದು ಸಂಜೆ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳ ತಂಡ ಸ್ಥಳಕ್ಕೆ ದಾಳಿ ನಡೆಸಿದೆ.
ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. ನಂ: 48/2026ರಡಿ ಐಟಿಪಿ ಕಾಯ್ದೆಯ ಕಲಂ 3, 4, 5 ಹಾಗೂ ಬಿ.ಎನ್.ಎಸ್‌ನ ಕಲಂ 143(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.



