ಶಾಲಾ ಪ್ರಾರಂಭೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದ ನೆಲ್ಯಾಡಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್

ಶೇರ್ ಮಾಡಿ

ಶೋಭಾಯಾತ್ರೆಯೊಂದಿಗೆ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ – ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ – ಶಿಕ್ಷಕರಿಗೆ ಸನ್ಮಾನ

 

ಶಾಲಾ ಪ್ರಾರಂಭೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದ ನೆಲ್ಯಾಡಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್

ನೆಲ್ಯಾಡಿ: ನೆಲ್ಯಾಡಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್, ನೆಲ್ಯಾಡಿಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಸೋಮವಾರ ಅತ್ಯಂತ ಸಂಭ್ರಮ ಹಾಗೂ ವಿಜೃಂಭಣೆಯಿಂದ ನಡೆಯಿತು.

ಶಾಲೆಗೆ ಹೊಸದಾಗಿ ದಾಖಲಾತಿ ಪಡೆದ ವಿದ್ಯಾರ್ಥಿಗಳನ್ನು ಬ್ಯಾಂಡ್ ಸೆಟ್ ಹಾಗೂ ಶೋಭಾಯಾತ್ರೆಯ ಮೂಲಕ ಶಾಲಾ ಆವರಣಕ್ಕೆ ಭವ್ಯವಾಗಿ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ಬಣ್ಣಬಣ್ಣದ ಬೆರಳಚ್ಚುಗಳ ಮೂಲಕ ವೃಕ್ಷದ ಚಿತ್ರವನ್ನು ಪೂರ್ಣಗೊಳಿಸುವ ಮೂಲಕ ತಮ್ಮ ಸೃಜನಶೀಲ ಪ್ರತಿಭೆಯನ್ನು ಅನಾವರಣಗೊಳಿಸಿದರು. ಅಲ್ಲದೆ, ಶಾಲಾ ಪ್ರಾರಂಭೋತ್ಸವದ ನೆನಪಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ್ದ ಸೆಲ್ಫಿ ಕಾರ್ನರ್‌ನಲ್ಲಿ ಛಾಯಾಚಿತ್ರಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಸಿಹಿಯೂಟದ ವ್ಯವಸ್ಥೆಯೂ ವಿದ್ಯಾರ್ಥಿಗಳ ಸಂತಸವನ್ನು ಮತ್ತಷ್ಟು ಹೆಚ್ಚಿಸಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಬಾರಿಗೆ ಆಯ್ಕೆಯಾದ ಶಾಲೆಯ ಸಹಶಿಕ್ಷಕ ವಿಮಲ್ ಕುಮಾರ್ ಕೆ.ಎ. ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಕ್ರೀಡಾಕೂಟದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಶಿಕ್ಷಕಿ ಸುಜಾತ ಕೆ. ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ದಿನಕರ್ ಕೆ. ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ್ ಕೆ.ಎಸ್., ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕೆ., ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ್ ಕೆ.ಎಸ್. ಅವರು ಸ್ವಾಗತಿಸಿ, ಶಾಲೆಯಲ್ಲಿ ಜಾರಿಯಲ್ಲಿರುವ ವಿವಿಧ ಶೈಕ್ಷಣಿಕ ಯೋಜನೆಗಳು ಹಾಗೂ ಸಾಧನೆಗಳ ಕುರಿತು ಮಾಹಿತಿ ನೀಡಿದರು. ಹಿರಿಯ ಶಿಕ್ಷಕಿ ಮೇರಿ ಜಾನ್ ವಂದನಾರ್ಪಣೆಗೈದರೆ, ವಿಮಲ್ ಕುಮಾರ್ ಕೆ.ಎ. ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಸಕ್ರಿಯ ಭಾಗವಹಿಸುವಿಕೆಯಿಂದ ಶಾಲಾ ಪ್ರಾರಂಭೋತ್ಸವವು ಯಶಸ್ವಿಯಾಗಿ ನೆರವೇರಿದ್ದು, ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ಉತ್ಸಾಹಭರಿತ ವಾತಾವರಣವನ್ನು ನಿರ್ಮಿಸಿತು.

 

Leave a Reply

error: Content is protected !!