ಉಪ್ಪಿನಂಗಡಿ: ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಡ್ರಗ್ಸ್ ಹಾಗೂ ಮಾದಕ ವ್ಯಸನ ಜಾಗೃತಿ ಕಾರ್ಯಗಾರ

ಶೇರ್ ಮಾಡಿ

 

ಉಪ್ಪಿನಂಗಡಿ: ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರೇರೇಪಿಸುವ ಉದ್ದೇಶದಿಂದ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿಯಲ್ಲಿ ಜೂ.24ರಂದು ಡ್ರಗ್ಸ್ ಹಾಗೂ ಮಾದಕ ವ್ಯಸನ ಜಾಗೃತಿ ಕಾರ್ಯಗಾರವನ್ನು ಆಯೋಜಿಸಲಾಯಿತು.

ಉಪ್ಪಿನಂಗಡಿ ಆರಕ್ಷಕ ಠಾಣೆಯ ಉಪಠಾಣಾಧಿಕಾರಿ ಸುಕೇಶ್ ಕೆ.ಪಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಹದಿಹರೆಯದ ವಿದ್ಯಾರ್ಥಿಗಳ ಮನಸ್ಸು ಅತ್ಯಂತ ಚಂಚಲ ಸ್ವಭಾವದ್ದಾಗಿದ್ದು, ತಪ್ಪು ಪ್ರಭಾವಗಳಿಗೆ ಸುಲಭವಾಗಿ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್ ಹಾಗೂ ಇತರ ಮಾದಕ ವ್ಯಸನಗಳ ಕುರಿತು ಸಮರ್ಪಕ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಡ್ರಗ್ಸ್ ಸೇವನೆಯಿಂದ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ವಿವರಿಸಿದ ಅವರು, ಯುವಜನತೆ ಮಾದಕ ವ್ಯಸನದ ಬಲೆಗೆ ಬೀಳದಂತೆ ಎಚ್ಚರ ವಹಿಸಬೇಕು. ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯತ್ತ ಗಮನಹರಿಸಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಶಿಕ್ಷಕಿ ವೀಣಾ ಆರ್. ಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗುವಂತೆ ಸಲಹೆ ನೀಡಿದರು.

ಸಹ ಶಿಕ್ಷಕಿ ನಿವೇದಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಡ್ರಗ್ಸ್ ಜಾಗೃತಿಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಪಡೆದುಕೊಂಡರು.

 

Leave a Reply

error: Content is protected !!