ದ್ವಿತೀಯ ಪಿಯುಸಿ, ಕೆಸಿಇಟಿ ಹಾಗೂ ಜೆಇಇ ಪರೀಕ್ಷೆಯಲ್ಲಿ ಮಿಂಚಿದ ಸಂಸ್ಥೆಯ ವಿದ್ಯಾರ್ಥಿಗಳು










ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ, ಕೆಸಿಇಟಿ ಹಾಗೂ ಜೆಇಇ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಹಾಗೂ 9ನೇ ಸ್ಥಾನ ಪಡೆದ ವಿದ್ಯಾರ್ಥಿಗಳೊಂದಿಗೆ, ಕೆಸಿಇಟಿ ಮತ್ತು ಜೆಇಇ ಪರೀಕ್ಷೆಗಳಲ್ಲಿ ವಿಶೇಷ ಸಾಧನೆ ಮಾಡಿದ 17 ವಿದ್ಯಾರ್ಥಿಗಳು ಹಾಗೂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 69 ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯಪ್ರಸಾದ್ ಕಡಮ್ಮಾಜೆ, ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಆ ಗೀಳಿನಿಂದ ಹೊರಬಂದು ಜೀವನದಲ್ಲಿ ಸ್ಪಷ್ಟ ಗುರಿಯನ್ನು ಹೊಂದಿ ಸಮಯಪ್ರಜ್ಞೆಯಿಂದ ಶ್ರಮಿಸಿದರೆ ಯಶಸ್ಸು ಖಚಿತ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜೊತೆಗೆ, ಯುವಜನತೆ ಸ್ವಚ್ಛ ಪರಿಸರ ನಿರ್ಮಾಣದಲ್ಲಿ ಕೈಜೋಡಿಸಿ ಉತ್ತಮ ಸಮಾಜ ನಿರ್ಮಾಣದ ಹರಿಕಾರರಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಮೈನಾಶ್ರೀ, ಅನಘಾ, ಅಕ್ಷತಗಂಗಾ, ವಿದಿಶಾ, ಯಶ್ವಿತ್, ಪ್ರಣಾಮ್ ಹಾಗೂ ಜಸ್ವ್ವಿಕ್ ಅವರು ಕಾಲೇಜಿನ ಎರಡು ವರ್ಷದ ಕಲಿಕಾ ಅನುಭವವನ್ನು ಹಂಚಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಹೆಚ್.ಕೆ. ಪ್ರಕಾಶ್, ಉತ್ತಮ ಸಾಧನೆಯ ಮೂಲಕ ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರ ಮುಂದಿನ ಶೈಕ್ಷಣಿಕ ಬದುಕಿಗೂ ಶುಭ ಹಾರೈಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ರಾಜೇಶ್ ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪೋಷಕರು, ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಸಾಯನ ಶಾಸ್ತ್ರ ಉಪನ್ಯಾಸಕಿಯರಾದ ಸೌಮ್ಯ ಕೆ ಹಾಗೂ ಡಾ.ರಜತ ಕೆ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ಚೈತ್ರ ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಸ್ವಾತಿ ಬಿ.ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಚಂದ್ರಿಕಾ ವಂದಿಸಿದರು.



