









ನೆಲ್ಯಾಡಿ: ಕೌಕ್ರಾಡಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಅತ್ಯಂತ ಭಕ್ತಿಭಾವದೊಂದಿಗೆ ನೆರವೇರಿತು.
ದೇವಳದ ಗೌರವಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಅವರ ಕೃಪಾಶೀರ್ವಾದದೊಂದಿಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಶ್ರೀಧರ ನೂಜಿನ್ನಾಯರ ಅವರ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ದೇವಸ್ಥಾನದ ಸಹ ಅರ್ಚಕರಾದ ಅಶ್ವಥ್ ನಾರಾಯಣ ತೋಡ್ತಿಲ್ಲಾಯ ಅವರು ಪೂಜಾ ಕೈಂಕರ್ಯ ಹಾಗೂ ಧಾರ್ಮಿಕ ವಿಧಿವಿಧಾನಗಳಿಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಕೇಶ್ ಎಸ್ ದಂಪತಿಗಳು ಸಾರ್ವಜನಿಕರ ಪರವಾಗಿ ವಿಶೇಷ ಪೂಜಾ ಕೈಂಕರ್ಯವನ್ನು ನೆರವೇರಿಸಿ ಭಕ್ತಿಯ ಸಮರ್ಪಣೆಯನ್ನು ಸಲ್ಲಿಸಿದರು.
ಪೂಜೆ ಸಮಾಪ್ತಿಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜಾ ಪ್ರಸಾದ ವಿತರಣೆ ಮಾಡಲಾಗಿದ್ದು, ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ಕಾರ್ಯದರ್ಶಿ ರಾಕೇಶ್ ಎಸ್., ಉಪಾಧ್ಯಕ್ಷ ರಘುನಾಥ ಕೆ ಪತ್ಮಾರ್ಪಿತ, ಕೋಶಾಧಿಕಾಧಿ ಸುಧೀರ್ ಕುಮಾರ್ ಕೆ.ಎಸ್., ಜೊತೆ ಕಾರ್ಯದರ್ಶಿ ರಮೇಶ್ ಬಾಣಜಾಲು ಹಾಗೂ ದೇವಸ್ಥಾನದ ಪದಾಧಿಕಾರಿಗಳು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಅರ್ಚಕ ವೃಂದ ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು, ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



