









ಬೆಳ್ತಂಗಡಿ: ತಾಲೂಕಿನ ಸುಲ್ಕೇರಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂಜಾನೆ ಸುಲ್ಕೇರಿ ಗ್ರಾಮದಲ್ಲಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮಾರುತಿ ಸುಜುಕಿ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಕ್ರೀಟ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ವಿದ್ಯುತ್ ಕಂಬ ಮುರಿದು ಕಾರಿನ ಮೇಲೆಯೇ ಬಿದ್ದ ಪರಿಣಾಮ ಕಾರಿನ ಮುಂಭಾಗ, ಬಾನೆಟ್, ಬಂಪರ್ ಹಾಗೂ ಇಂಜಿನ್ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಯ ಮೇಲೆ ಬಿದ್ದಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸುರಕ್ಷತಾ ದೃಷ್ಟಿಯಿಂದ ಮೆಸ್ಕಾಂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿ ದುರಸ್ತಿ ಕಾರ್ಯ ಆರಂಭಿಸಿದರು.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿರುವುದಾಗಿ ತಿಳಿದು ಬಂದಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಪೊಲೀಸರಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



