ನೇಸರ ಎ.07: ಹವಾನಿಯಂತ್ರಕ ಹಾಗೂ ರೆಫ್ರಿಜರೇಟರ್ ದುರಸ್ತಿಗೊಳಿಸುವ ಅಂಗಡಿಯೊಂದು ಬೆಂಕಿಯ ಕೆನ್ನಾಲಗೆಗೆ ಹೊತ್ತಿ ಉರಿದ ಘಟನೆ ಮಾ.07( ಇಂದು) ಮದ್ಯಾಹ್ನ ಪುತ್ತೂರಿನ ಉರ್ಲಾಂಡಿ ಎಂಬಲ್ಲಿ ನಡೆದಿದೆ.
ಪುತ್ತೂರಿನ ಬೈಪಾಸ್ ರಸ್ತೆಯ ಸುಶ್ರುತ ಆಸ್ಪತ್ರೆ ಬಳಿಯ ಕೃಷ್ಣ ಕಾಂಪ್ಲೆಕ್ಸ್ ನಲ್ಲಿರುವ ವಿವೇಕ್ ಮಾಲಕತ್ವದ ಸುರಭಿ ಬೆಂಕಿಗಾಹುತಿಯಾದ ಅಂಗಡಿ. ಇಂದು ಬೆಳಿಗ್ಗೆ 11.30 ರ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ಈ ಸಮಯದಲ್ಲಿ ಅಂಗಡಿಯಲ್ಲಿ ಯಾರು ಇರಲಿಲ್ಲ. ಅಂಗಡಿಯ ಮಾಲಕರು ಮತ್ತು ಸಿಬಂದಿಗಳು ರಿಪೇರಿ ನಿಮಿತ್ತ ಅಂಗಡಿಯ ಶಟರ್ ಹಾಕಿ ಹೊರಗಡೆ ಹೋಗಿದ್ದರು. ಸುರಭಿ ಅಂಗಡಿಯ ಒಳಗಿನಿಂದ ಜೋರಾದ ಶಬ್ದ ಕೇಳಿದ್ದು, ಈ ವೇಳೆ ಪಕ್ಕದ ಅಂಗಡಿಯವರು ಬಂದು ನೋಡಿದಾಗ ಒಳಗಿನಿಂದ ಹೊಗೆ ಬರುತ್ತಿರುವುದು ಕಾಣಿಸಿದೆ. ಈ ಸಂದರ್ಭ ಸುಶ್ರುತ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಅಕ್ಕ ಪಕ್ಕದ ಅಂಗಡಿಯವರು ಶಟರ್ ಮೇಲೆ ಎಳೆದು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿ ಬೆಂಕಿ ನಂದಿಸುವ ಹಾಗೂ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡರು. ಕೆಲ ಸಮಯದ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಯಿತು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಮಳಿಗೆಯಲ್ಲಿದ್ದ ಫ್ರಿಜ್, ಏರ್ ಕಂಡಿಷನ್ ಹಾಗೂ ಇತರೆ ಬಿಡಿಭಾಗಗಳು ಸಂಪೂರ್ಣ ಬೆಂಕಿಗೆ ಆಹುತಿಗಾಗಿದೆ. ಅಂದಾಜು 25 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಮಾಲಕ ವಿವೇಕ್ ರವರು ತಿಳಿಸಿದ್ದಾರೆ. ಅಂಗಡಿಯ ಒಳಗಿನ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯ ಮಾಹಿತಿ ಪಡೆದ ಪುತ್ತೂರು ನಗರಸಭೆಯ ಅಧ್ಯಕ್ಷ ಜೀವಂಧರ್ ಜೈನ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
—ಜಾಹೀರಾತು—