
ನೇಸರ ನ13: ಗುಂಡ್ಯ ಹೊಳೆಯಲ್ಲಿ ನಾಲ್ಕು ದಿನಗಳ ಹಿಂದೆ ರಾಜಸ್ಥಾನದ ಯುವಕನೋರ್ವ ಸೆಲ್ಫಿ ತೆಗೆಯುವ ಸಂದರ್ಭ ಆಯತಪ್ಪಿ ನೀರಿಗೆ ಬಿದ್ದು ಕಣ್ಮರೆಯಾಗಿದ್ದ. ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಪ್ರಯತ್ನ ಪಟ್ಟು ಶೋಧಕಾರ್ಯ ನಡೆಸಿದರು ಯುವಕನ ಕುರುಹು ಪತ್ತೆಯಾಗದ ಹಿನ್ನೆಲೆ ತಾತ್ಕಾಲಿಕವಾಗಿ ಶೋಧ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.
ಬುಧವಾರ ಸಂಜೆ ರಾಜಸ್ಥಾನ ಮೂಲದ ಸೀತಾರಾಮ್ ನೀರಿನಲ್ಲಿ ಆಟವಾಡುತ್ತಾ ಪಕ್ಕದಲ್ಲಿದ್ದ ಬಂಡೆಯ ಮೇಲೆ ನಿಂತಿರುತ್ತಾನೆ. ಈ ವೇಳೆ ಆತನ ಗೆಳೆಯ ಈ ದೃಶ್ಯವನ್ನು ಚಿತ್ರೀಕರಿಸಿ, ಬಳಿಕ ಸೀತಾರಾಮ್‍ನ ಪಕ್ಕಕ್ಕೆ ಬಂದು ಸೆಲ್ಫಿ ವಿಡಿಯೋ ತೆಗೆಯಲು ಮುಂದಾಗುತ್ತಾನೆ. ಆಗ ಸೀತಾರಾಮ್ ಆಯತಪ್ಪಿ ನೀರಿಗೆ ಬಿದ್ದು ಕಣ್ಮರೆಯಾಗಿರುತ್ತಾನೆ.
ನಾಲ್ಕು ದಿನದ ಶೋಧ ಕಾರ್ಯದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ, ನೆಲ್ಯಾಡಿ ಹೊರಠಾಣೆ ಪೋಲಿಸರು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ನೆಲ್ಯಾಡಿ ಪರಶುರಾಮ ಕ್ರೇನ್ ತಂಡದ ಸದಸ್ಯರು, ನೆಲ್ಯಾಡಿ ಅಶ್ವಿನಿ ಅಂಬುಲೆನ್ಸ್ ತಂಡದ ಸದಸ್ಯರು, ಧರ್ಮಸ್ಥಳದ ಈಜುಗಾರರ ತಂಡ, ತಣ್ಣಿರು ಬಾವಿ ಈಜುಗಾರರ ತಂಡ ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು.ಇಂದು ಡ್ರೋನ್ ಕ್ಯಾಮರದ ಸಹಾಯದಿಂದ ಕೂಡ ಶೋಧ ಕಾರ್ಯ ನಡೆಸಿದರು ನೆಲ್ಯಾಡಿ ಹೊರಠಾಣೆ ಪೋಲಿಸರು.

ವಿ.ಸುಂದರ್, ಠಾಣಾಧಿಕಾರಿ, ಅಗ್ನಿಶಾಮಕ ದಳ, ಪುತ್ತೂರು. ಇವರನ್ನು ಸಂಪರ್ಕಿಸಿದಾಗ:
ಈ ಪ್ರದೇಶ ತೀರಾ ಅಪಾಯಕಾರಿಯಾಗಿದ್ದು, ಜೀವ ಪಣಕ್ಕಿಟ್ಟು ನಮ್ಮ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿದರೂ ಇನ್ನು ಕೂಡ ಕಣ್ಮರೆಯಾದ ಯುವಕನ ಕುರುಹು ಪತ್ತೆಯಾಗಿಲ್ಲ. ಆದರೂ ಯುವಕನ ರಕ್ಷಣೆಯ ನಿಟ್ಟಿನಲ್ಲಿ ತೀರಾ ಅಪಾಯದ ಜಾಗದಲ್ಲೂ ದೋಣಿಯ ಸಹಾಯದಿಂದ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ್ದೇವೆ. ಬಂಡೆಕಲ್ಲುಗಳ ಮೇಲೆ ಕಾಲಿಟ್ಟರೆ ಸಂಪೂರ್ಣ ಜಾರಿ ಹೋಗುವ ಸಾಧ್ಯತೆಗಳೇ ಇದೆ. ಯಾವುದೇ ಲೈಪ್ ಜಾಕೆಟ್ ಬಳಸಿದರೂ ಈ ಪ್ರದೇಶದಲ್ಲಿ ಉಪಯೋಗಕ್ಕೆ ಬಾರದು. ಸದ್ಯದ ಪರಿಸ್ಥಿತಿಯಲ್ಲಿ ಯೋಚಿಸಿದಾಗ ಯುವಕ ಬಂಡೆಕಲ್ಲುಗಳ ಅಥವಾ ಮಾಟೆಯ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಗಳೇ ಹೆಚ್ಚು. ಈ ನಿಟ್ಟಿನಲ್ಲಿ ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸುತ್ತೇವೆ ಎಂದು ತಿಳಿಸಿದರು.