ತಾಲೂಕಿನ 3 ಶಾಲೆಗಳು ಮತ್ತೆ ಯಥಾಸ್ಥಿತಿಗೆ : ಬದಿಪಳಿಕೆಯ 4 ಮಕ್ಕಳು ಅನಾರಿಗೆ ಶಿಫ್ಟ್

ಶೇರ್ ಮಾಡಿ

ನೇಸರ ಜು.02: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಬದಿಪಳಿಕೆಯ 4 ಮಕ್ಕಳ ಪೋಷಕರ ಒಮ್ಮತದ ನಿರ್ಧಾರದಿಂದ 3 ಶಾಲೆಗಳಿಗೆ ಆಗಿದ್ದಂತಹ ತೊಂದರೆ ಶಮನವಾಗಿ ಮತ್ತೆ ಯಥಾಸ್ಥಿತಿಯಲ್ಲಿ ಆಯಾಯ ಶಾಲೆಗಳಲ್ಲಿಯೇ ಶಿಕ್ಷಕರು ಕರ್ತವ್ಯ ನಿರ್ವಹಿಸಲು ಆರಂಭಿಸಿದ್ದಾರೆ.
ಬದಿಪಳಿಕೆಯಲ್ಲಿ ಶೂನ್ಯ ಶಿಕ್ಷಕರ ಕಾರಣದಿಂದಾಗಿ ಅಲ್ಲಿ ದಾಖಲಾತಿಗೊಂಡಿದ್ದ 4 ವಿದ್ಯಾರ್ಥಿಗಳು ಸಮರ್ಪಕ ಶಿಕ್ಷಕರಿಲ್ಲದೆ ತೊಂದರೆಗೊಳಪಟ್ಟಿದ್ದರು. ಇವರಿಗೆ ಪಟ್ರಮೆ ಎ (ಅನಾರು) ಶಾಲೆಯ ಶಿಕ್ಷಕರನ್ನು ಅಲ್ಪಸಮಯಕ್ಕೆ ನಿಯೋಜಿಸಲಾಗಿತ್ತು. ಆದರೆ ಅಲ್ಲಿಯೂ ಶಿಕ್ಷಕರ ಕೊರತೆ ಇದ್ದ ಕಾರಣ ಅಲ್ಲಿಯ ಪೋಷಕರು ಶಿಕ್ಷಕರ ನಿಯೋಜನೆಗೆ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟಿಸಿದ್ದರು. ಈ ಬಗ್ಗೆ ನೇಸರ ನ್ಯೂಸ್ ಸಮಗ್ರ ವರದಿ ಪ್ರಕಟಿಸಿತ್ತು.
ಪಟ್ರಮೆ(ಎ) ಶಾಲೆಯ ಪೋಷಕರ ಪ್ರತಿಭಟನೆಯ ಫಲವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಶಾಲೆಯ ಶಿಕ್ಷಕರೊಬ್ಬರನ್ನು ಬದಿಪಳಿಕೆಗೆ ನಿಯೋಜನೆಗೊಳಿಸಿದರು. ಬದಲಾಗಿ ಇಲಾಖೆಯಿಂದ ಒಂದು ಶಿಕ್ಷಕರನ್ನು ಹಾಗೂ ಒಂದು ಅತಿಥಿ ಶಿಕ್ಷಕರನ್ನು ಉಪ್ಪಾರಪಳಿಕೆ ಶಾಲೆಗೆ ನೀಡುವ ಭರವಸೆ ನೀಡಿದರು.
ಆದರೆ ಉಪ್ಪಾರಪಳಿಕೆ ಶಾಲಾ ಪೋಷಕರು ಮೊದಲು ಇಲ್ಲಿಗೆ ಬರುವಂತಹ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲಿ, ಬಳಿಕವಷ್ಟೇ ಇಲ್ಲಿಯ ಶಿಕ್ಷಕರನ್ನು ನಿಯೋಜನೆಗೊಳಿಸಿ, ಇಲ್ಲವಾದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪ್ರತಿಭಟಿಸಿದರು. ಈ ಬಗ್ಗೆಯೂ ನೇಸರ ನ್ಯೂಸ್ ನಲ್ಲಿ ವರದಿ ಪ್ರಕಟವಾಗಿತ್ತು.
ಮುಂದುವರಿದ ಭಾಗವಾಗಿ ಕೊಕ್ಕಡದ ಹಳ್ಳಿಂಗೇರಿ ಶಾಲೆಯ ಶಿಕ್ಷಕಿ ಒಬ್ಬರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬದಿಪಳಿಕೆ ಶಾಲೆಗೆ ತೆರಳುವಂತೆ ನಿಯೋಜಿಸಿದರು. ಆದರೆ ಅಲ್ಲಿನ ಶಿಕ್ಷಕಿ ಆರೋಗ್ಯ ಸಮಸ್ಯೆಯಿಂದ ಹೋಗಲು ಸಾಧ್ಯವಾಗಲಿಲ್ಲ. ಹೀಗೇಯೇ ಮುಂದುವರಿದು ತಾರ್ಕಿಕ ಅಂತ್ಯವಿಲ್ಲದ ಪರಿಸ್ಥಿತಿ ಮುಟ್ಟಿತು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ತಾಲೂಕಿನ ಶಾಸಕರು, ಮೊದಲಿನಂತೆಯೇ ಶಿಕ್ಷಕರು ಅವರವರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ವ್ಯವಸ್ಥೆ ಕಲ್ಪಿಸಿ ಸಮಸ್ಯೆಯನ್ನು ನಿವಾರಿಸಿದ್ದಾರೆ.
ಶಾಸಕರ ಮುತುವರ್ಜಿಯಿಂದ 4 ಮಕ್ಕಳು ವಿದ್ಯಾಬ್ಯಾಸಕ್ಕಾಗಿ ಪಟ್ರಮೆ (ಎ) ಶಾಲೆಗೆ:
ಪಟ್ರಮೆ ಗ್ರಾಮದ ಬದಿಪಳಿಕೆಯ ಸಮಸ್ಯೆ ಪಟ್ರಮೆ ಹಾಗೂ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಹಾಗೂ ಹಳ್ಳಿಗೇರಿ ಶಾಲೆಗೂ ವ್ಯಾಪಿಸಿದ ಬಗ್ಗೆ ಪಟ್ರಮೆ ಗ್ರಾ.ಪಂ. ಸದಸ್ಯರು ಕೊಕ್ಕಡ ಗ್ರಾ.ಪಂ. ಅಧ್ಯಕ್ಷರು, ತಾಲೂಕು ಶಾಸಕರಾದ ಹರೀಶ್ ಪೂಂಜರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಮನವಿ ಮಾಡಿದರು.
ಬದಿಪಳಿಕೆಯ ನಾಲ್ಕು ಮಕ್ಕಳ ಪೋಷಕರು ಒಪ್ಪುವುದಾದರೆ ಅವರನ್ನು ಪಟ್ರಮೆ (ಎ) ಶಾಲೆಗೆ ಕಳುಹಿಸುವಂತೆ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು. ಆ 4 ಮಕ್ಕಳಿಗೆ ಶಾಲೆಗೆ ಹೋಗುವ ಹಾಗೂ ಬರುವ ಸಂಚಾರದ ವ್ಯವಸ್ಥೆಯನ್ನು ಶಾಸಕರೇ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು. ಆದರೆ ಆರಂಭದಲ್ಲಿ ಬದಿಪಳಿಕೆ ಶಾಲೆಯ ಪೋಷಕರು ಇದಕ್ಕೆ ಒಪ್ಪಲಿಲ್ಲ. ನಮ್ಮ ಶಾಲೆ ಉಳಿಯಬೇಕು. ಹಾಗಾಗಿ ಮಕ್ಕಳನ್ನು ಎಲ್ಲಿಗೂ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ದಾಖಲಾತಿ ಬದಲಾಯಿಸದೆ ವಿದ್ಯಾಭ್ಯಾಸ ಮಾತ್ರ ಅನಾರು ಶಾಲೆಯಲ್ಲಿ ಕಲ್ಪಿಸಿ ಕೊಡುವಂತೆ ಹೇಳಲಾಯಿತು. ಇದಕ್ಕೂ ಒಮ್ಮತದ ನಿರ್ಧಾರ ಅಲ್ಲಿರಲಿಲ್ಲ. ಬಳಿಕ ಸ್ಥಳೀಯರಾದ ಸಾಮಾಜಿಕ ಕಳಕಳಿ ಇರುವ ಸಮಾಜ ಸೇವಕ ಶ್ಯಾಮರಾಜ್ ಪಟ್ರಮೆಯವರು ಅಲ್ಲಿನ ಪೋಷಕರ ಮನ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾದರು. ಕೊನೆಗೂ ಅಲ್ಲಿನ ಪೋಷಕರ ಅಂತಿಮ ನಿರ್ಧಾರದಿಂದ ಸಮಸ್ಯೆಯಲ್ಲಿದ್ದ ತಾಲೂಕಿನ 3 ಶಾಲೆಗಳು ಮತ್ತೆ ಮೊದಲಿನಂತೆಯೇ ಕಾರ್ಯ ಆರಂಭಿಸುತ್ತಿವೆ.

Leave a Reply

error: Content is protected !!