ನೇಸರ ಜು.02: ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಜೀವನದಲ್ಲಿ ಗುರಿ ಬೇಕು. ಗುರಿ ತಲುಪಲು ಸತತ ಪ್ರಯತ್ನ, ತಾಳ್ಮೆ, ಬದ್ಧತೆ ಅಗತ್ಯ. ಯಶಸ್ಸು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ತರಗತಿಗಳ ಜತೆ ಜ್ಞಾನದ ಶಿಕ್ಷಣವು ಬದುಕಿಗೆ ಪೂರಕವಾಗುತ್ತದೆ ಎಂದು ಉಜಿರೆ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಹೇಳಿದರು.
ಅವರು ಉಜಿರೆ ಎಸ್. ಡಿ.ಎಂ.ಪಾಲಿಟೆಕ್ನಿಕ್ ನ ಸರ್ಕ್ಯೂಟ್ ಎಕ್ಸ್ಪೋ-2022 ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಮತ್ತು ಜೀವನ ಮೌಲ್ಯ ಜತೆಯಾಗಿರಬೇಕು ಬದುಕಿನಲ್ಲಿ ಜೀವನ ಕೌಶಲ್ಯ ಮತ್ತು ಮೌಲ್ಯಗಳನ್ನು ಸೇರಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಮಯದ ಸದುಪಯೋಗ ಪಡೆದುಕೊಂಡು ನೂತನ ಆವಿಷ್ಕಾರ, ಯೋಚನೆ ಯೋಜನೆಗಳನ್ನು ನಿರಂತರ ನಡೆಸಿಕೊಂಡು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಎಸ್.ಡಿ.ಎಂ. ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ಎಂ.ಆರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.ಪ್ರಾಚಾರ್ಯ ಸಂತೋಷ್ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಈ ಎಂಡ್ ಸಿ ವಿಭಾಗದ ಮುಖ್ಯಸ್ಥೆ ಮೇರಿಸ್ಮಿತಾ, ಕಚೇರಿ ಮುಖ್ಯಸ್ಥ ಚಂದ್ರನಾಥ ಜೈನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಣವ್ ಸ್ವಾಗತಿಸಿ, ಗೌತಮ್ ಕಾರ್ಯಕ್ರಮ ನಿರೂಪಿಸಿದರು. ಅಭಿಷೇಕ್ ವಂದಿಸಿದರು
ವಿದ್ಯಾರ್ಥಿಗಳು ಆವಿಷ್ಕರಿಸಿ ಸಿದ್ಧಪಡಿಸಿದ ಪ್ರೊಜೆಕ್ಟ್ ಮಾದರಿಗಳನ್ನು ಪ್ರದರ್ಶಿಸಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಂದ ಕ್ವಿಜ್ ಪಿಕ್ ಅಂಡ್ ಸ್ಪೀಚ್, ಸಾಂಸ್ಕೃತಿಕ, ಮನರಂಜನೆ, ಬಹುಮಾನ ವಿತರಣೆ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಿತು.