ನೇಸರ ಜು.10: ತಾಲೂಕಿನ ಜನತೆ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ತಾಲೂಕಿನಲ್ಲಿ ಮಿನಿ ಏರ್ ಪೋರ್ಟ್ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು ಈ ಬಗ್ಗೆ ಕೇಂದ್ರ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಮೋದಿಯವರ ಕೇಂದ್ರ ಸರಕಾರ 8 ವರ್ಷದ ಆಡಳಿತ ಪೂರೈಸಿದ ಹಿನ್ನೆಯಲ್ಲಿ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಶನಿವಾರ ಜರಗಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಸಾಧನೆ ಹಾಗೂ ಸಮಾಜ ಮುಖಿ ಕಾರ್ಯಗಳನ್ನು ಗುರುತಿಸಿ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಬೆಳ್ತಂಗಡಿಗೆ ವಿಶೇಷ ಗೌರವ ಸ್ಥಾನ ಮಾನ ಸಿಕ್ಕಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಯವರು ಭಾರತ ದೇಶವನ್ನು ತಮ್ಮ ಆಡಳಿತದ ಮೂಲಕ ಜಗತ್ತು ಗುರುತಿಸುವಂತೆ ಮಾಡಿದ್ದಾರೆ. ಅವರ ಸಾಧನೆಗಳು ದೇಶದ ಕೀರ್ತಿಯನ್ನು ಹೆಚ್ಚಿಸಿವೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಮ್ಮ ಪ್ರಾಮಾಣಿಕ, ಚೈತನ್ಯ ಶೀಲ ವ್ಯಕ್ತಿತ್ವದ ಮೂಲಕ ತಾಲೂಕಿನ ಜನರ ಭರವಸೆ ಈಡೇರಿಸುವ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನಿ ಮೋದಿ ಯವರ ಸರಕಾರ 8 ವರ್ಷಗಳ ದಕ್ಷ ಆಡಳಿತ ಪೂರೈಸಿದ ಹಿನ್ನಲೆಯಲ್ಲಿ ತಾಲೂಕಿನಲ್ಲಿ 8 ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ತಾಲೂಕಿನ ನಾನಾ ಸಾಧಕರನ್ನು ಗೌರವಿಸುವ ಕೆಲಸ, ಸವಲತ್ತು ವಿತರಣೆ ಮಾಡಲಾಗಿದೆ ಎಂದರು.
ಮಾಜಿ ಶಾಸಕ ಪ್ರಭಾಕರ ಬಂಗೇರ, ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ ನಾರಾಯಣ್, ಬಿಜೆಪಿ ಎಸ್.ಟಿ. ಮೋರ್ಚಾದ ಜಿಲ್ಲಾ ಅಧ್ಯಕ್ಷ ಚೆನ್ನಕೇಶವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಹಿರಿಯ ಮುಖಂಡ ಕುಶಾಲಪ್ಪ ಗೌಡ, ಪದಾಧಿಕಾರಿ ಧನಲಕ್ಷ್ಮಿ ಜನಾರ್ಧನ್, ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಶ್ರೀನಿವಾಸ್ ರಾವ್, ಕಾರ್ಯದರ್ಶಿ ಪ್ರಶಾಂತ್, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಉಪಸ್ಥಿತರಿದ್ದರು.
ಅಳದಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು ಸ್ವಾಗತಿಸಿದರು. ರಾಜೇಶ್ ಪೆಂರ್ಬುಡ ನಿರೂಪಿಸಿದರು.
ಸಮಾರಂಭದಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 411 ಸಾಧಕರನ್ನು ಗೌರವಿಸಲಾಯಿತು.