ನೇಸರ ಜು.10: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗುಡ್ಡೆ ಸಮೀಪದ ಗೋಳಿತ್ತೊಟ್ಟು ಸರ್ಕಾರಿ ಶಾಲೆಯ ಬಳಿ ವಿಪರೀತ ಮಳೆಯ ಕಾರಣ ಗುಡ್ಡ ಕುಸಿತವಾಗಿ 50 ಮೀ. ನಷ್ಟು ಉದ್ದ ತಡೆಗೋಡೆ ಮುರಿದು ಬಿದ್ದಿದ್ದು ಚರಂಡಿ ಹಾಗೂ ರಸ್ತೆಗೆ ಮಣ್ಣು ಎಸೆಯಲ್ಪಪಟ್ಟಿದೆ. ರಸ್ತೆ ಪೂರ್ಣ ಕೆಸರು ಮಯವಾಗಿದ್ದು, ಬಳಿಕ ಮಣ್ಣನ್ನು ತೆರವುಗೊಳಿಸಲಾಯಿತು. ಈ ಪ್ರದೇಶದಲ್ಲಿ ಚತುಷ್ಪಥ ರಸ್ತೆ ಕಾರ್ಯಗಳು ನಡೆಯುತ್ತಿದ್ದು, ತಡೆಗೋಡೆ ಕಾಮಗಾರಿಯು ಕಳಪೆ ಗುಣ ಮಟ್ಟದಾಗಿದ್ದು, ತಡೆಗೋಡೆ ನಿರ್ಮಾಣ ಸಂದರ್ಭ ಯಾವುದೇ ರೀತಿಯ ಕಬ್ಬಿಣದ ಸರಳುಗಳನ್ನು ಬಳಸಿಲ್ಲ ಹಾಗೂ ಕೇವಲ ಕಾಂಕ್ರೀಟ್ ನಿಂದ ನಿರ್ಮಿಸಿದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ತುಂಡಾಗಿ ಬಿದ್ದಿರುವ ತಡೆಗೋಡೆಗಳು ಪುಡಿಪುಡಿಯಾಗಿ ಬಿದ್ದಿದ್ದು, ಒಂದು ತುಂಡು ಕಬ್ಬಿಣದ ಅಂಶ ಇದರಲ್ಲಿ ಇಲ್ಲ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ. ಕಳಪೆ ಕಾಮಗಾರಿಯ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಅರಿವಿದ್ದೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಯೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಈ ಭಾಗದಲ್ಲಿ ಮತ್ತಷ್ಟು ಮಣ್ಣಿನ ಕುಸಿತವಾಗುತ್ತಿದೆ.