ನೇಸರ ಜು.27: ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಮತ್ತು ಮುಂಡಾಜೆ ಪದವಿಪೂರ್ವ ಕಾಲೇಜಿನ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯದ ಓದು – ಒಂದು ಚಿಂತನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ ಯದುಪತಿ ಗೌಡ ಉದ್ಘಾಟಿಸಿದರು. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ವಿದ್ಯಾರ್ಥಿಗಳು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಅನುಭವಗಳನ್ನು ಬರೆಯುವ ಮೂಲಕ ನಿರಂತರ ಓದುಗರಾಗಬೇಕು ಉತ್ತಮ ಓದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು ಎಂದರು. ವಿಶೇಷ ಉಪನ್ಯಾಸವನ್ನು ನೀಡಿದ ಶ್ರೀ ಧ.ಮಂ. ಪ್ರೌಢಶಾಲೆ ಬೆಳಾಲು ಇಲ್ಲಿನ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಭಟ್ ವಿದ್ಯಾರ್ಥಿಗಳಿಗೆ ಸಂವಾದಕ್ಕೆ ಪ್ರೇರಣೆ ಕೊಡುವುದೇ ಸಾಹಿತ್ಯ. ನಾವು ಕೇಳಿದ ನೋಡಿದ ವಿಷಯಗಳನ್ನು ಆಧರಿಸಿಕೊಂಡು ಬರೆದಾಗ, ಬರವಣಿಗೆಯನ್ನು ಹವ್ಯಾಸವಾಗಿಟ್ಟುಕೊಂಡಾಗ ಉತ್ತಮ ಓದುಗರಾಗುತ್ತೇವೆ. ಕನ್ನಡ ನಾಡು ನುಡಿಯನ್ನು ಕಟ್ಟುವ ಬೆಳೆಸುವ ಕೆಲಸ ವಿದ್ಯಾರ್ಥಿಗಳಿಂದಲೇ ನಡೆಯಬೇಕಾಗಿದೆ. ಕನ್ನಡ ಭಾಷೆಯ ಸರ್ವಾಂಗೀಣ ಬೆಳವಣಿಗೆಗಾಗಿ ನಾವೆಲ್ಲರೂ ಸಂಕಲ್ಪ ಬಲದಿಂದ ದುಡಿಯಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ವಿನಯ ಚಂದ್ರ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಜಾಲಿ ಡಿ ಸೋಜಾ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ 14 ವಿದ್ಯಾರ್ಥಿಗಳು ಸ್ವರಚಿತ ಕವನಗಳನ್ನು ವಾಚಿಸಿದರು. ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಕನ್ನಡ ಸಂಘದ ಮುಖ್ಯಸ್ಥೆ ವಸಂತಿ ನಿರೂಪಿಸಿದರು. ಉಪನ್ಯಾಸಕ ಪದ್ಮನಾಭ ಬಿ.ಕೆ ಸ್ವಾಗತಿಸಿ ವಿದ್ಯಾ ರಾವ್ ಧನ್ಯವಾದಗೈದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.