ಭಾರಿ ಮಳೆ : 2 ದಿನ ಭಕ್ತರಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡದಂತೆ ಸೂಚನೆ

ಶೇರ್ ಮಾಡಿ

ನೇಸರ ಆ.01: ಸುಬ್ರಹ್ಮಣ್ಯ ಭಾರಿ ಮಳೆ ಸುರಿಯುತ್ತಿರುವ ಕಾರಣ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಮುಂದಿನ 2 ದಿನಗಳ ಕಾಲ ಹೊರ ಜಿಲ್ಲೆಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡದಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಈಗಾಗಲೇ ಕುಮಾರಧಾರ ನದಿ ಉಕ್ಕಿ ಹರಿದು ಆದಿ ಸುಬ್ರಹ್ಮಣ್ಯ ದೇವಾಲಯಕ್ಕೆ ನೀರು ನುಗ್ಗಿದ್ದು ನಾಗರ ಪಂಚಮಿಯ ಶುಭಾವಸರದಲ್ಲಿ ದೇವಾಲಯಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 2 ಮತ್ತು 3 ರಂದು ಜಿಲ್ಲಾಡಳಿತ ಭೇಟಿ ನೀಡದಂತೆ ಮನವಿ ಮಾಡಿದೆ.

ಇನ್ನೂ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಭಕ್ತರು ದೇವಾಲಯಕ್ಕೆ ತೆರಳಿದರೆ ಸಮಸ್ಯೆಗೆ ಸಿಲುಕುವ ಸಾಧ್ಯತೆಗಳಿವೆ.
ಸಚಿವ ವಿ.ಸುನಿಲ್ ಕುಮಾರ್ ಮನವಿ
ದ.ಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅದರಲ್ಲೂ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು,ಹರಿಹರ,ಬಾಳುಗೋಡು ಆಸುಪಾಸಿನ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಭಾಗದಲ್ಲಿ ಮುಂಜಾಗ್ರತ ಕ್ರಮವಹಿಸಲು ಎಸ್ ಡಿಆರ್ ಎಫ್ ಹಾಗೂ ಎನ್ ಡಿಆರ್ ಎಫ್ ತಂಡಗಳನ್ನು ಆ ಭಾಗಕ್ಕೆ ಈಗಾಗಲೆ ಕಳುಹಿಸಿಕೊಡಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಿಗೂ ಕಟ್ಟೆಚ್ಚರ ವಹಿಸಿ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ನೆರೆ ಸಂದರ್ಭ ಸಾರ್ವಜನಿಕರು ಸಹಕರಿಸಿ, ಸುರಕ್ಷತೆ ಕಡೆ ಹೆಚ್ಚಿನ ಗಮನಹರಿಸಬೇಕು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಒಂದೆರಡು ದಿನಗಳು ಕಾದು ಮಳೆ ಕಡಿಮೆಯಾದ ಬಳಿಕ ಕ್ಷೇತ್ರ ಸಂದರ್ಶಿಸುವಂತೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಗುಡ್ಡ ಜರಿದು ಬಿದ್ದು, ಮನೆ ಸಂಪೂರ್ಣ ನಾಶ
ವರುಣನರ್ಭಟಕ್ಕೆ ಕುಮಾರಧಾರ ಬಳಿಯ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಜರಿದು ಬಿದ್ದು, ಮನೆ ಸಂಪೂರ್ಣವಾಗಿ ನಾಶಗೊಂಡಿದ್ದು, ಮನೆ ಮಂದಿ ಮಣ್ಣಿನಡ್ಡಿ ಸಿಲುಕಿದ್ದಾರೆ. ಧಾರಾಕಾರ ಮಳೆಗೆ ಏಕಾಏಕಿ ಮನೆಯ ಹಿಂಬದಿಯ ಗುಡ್ಡ ಕುಸಿದು ಬಿದ್ದಿದೆ. ಮನೆಯಲ್ಲಿ ಇಬ್ಬರು ಮಕ್ಕಳು ಓರ್ವ ವೃದ್ದೆ ಸಹಿತ ನಾಲ್ಕೈದ್ದು ಮಂದಿ ವಾಸಿಸುತ್ತಿದ್ದರು. ಅವರೆಲ್ಲರೂ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

error: Content is protected !!