ನೇಸರ ಆ.01: ಕೊಕ್ಕಡ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರು ನೆರೆಮನೆಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಜುಲೈ 31ರಂದು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಅಂಕದ ಮಜಲು ಎಂಬಲ್ಲಿ ನಡೆದಿದೆ.
ಗಾಯಾಳುವನ್ನು ಜಾನ್ಸನ್ ಗಲ್ಬಾವೋ ಎಂದು ಗುರುತಿಸಲಾಗಿದ್ದು, ಇವರ ತಲೆಗೆ ನೆರೆಹೊರೆಯವರಾದ ಶಿವಪ್ರಸಾದ್ ಎಂಬುವವರು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಉಪ್ಪಿನಂಗಡಿ ಠಾಣೆಯಲ್ಲಿ ಜಾನ್ಸನ್ ಗಲ್ಬಾವೋ ರವರ ಪತ್ನಿ ನ್ಯಾನ್ಸಿ ಲವೀನ ಪಿಂಟೋ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜಾನ್ಸನ್ ಗಲ್ಬಾವೋ ಹಾಗೂ ಶಿವಪ್ರಸಾದ್ ರವರಿಗೆ ಜಾಗದ ವಿಷಯದಲ್ಲಿ ತಕರಾರುಗಳಿದ್ದು ಪದೇ ಪದೇ ಜಗಳಗಳಾಗುತ್ತಿತ್ತು ಎನ್ನಲಾಗಿದೆ. ಭಾನುವಾರ ವಿಪರೀತ ಮಳೆ ಹಿನ್ನೆಲೆ ಶಿವಪ್ರಸಾದ್ ರವರ ಮನೆಯ ಕಡೆಯಿಂದ ಜಾನ್ಸನ್ ಗಲ್ಬಾವೋ ಅವರ ಮನೆಯ ಕಡೆಗೆ ನೀರು ಒಮ್ಮೆಲೇ ಹರಿದು ಬರುತ್ತಿರುವ ಕಾರಣ ಅದನ್ನು ತಡೆಯಲು ಜಾನ್ಸನ್ ಗಲ್ಬಾವೋ ಕೆಂಪು ಕಲ್ಲುಗಳನ್ನು ಇಡುತ್ತಿದ್ದಾಗ ಹಿಂಬದಿಯಿಂದ ಜಾನ್ಸನ್ ಗಲ್ಬಾವೋ ಅವರಿಗೆ ಶಿವಪ್ರಸಾದ್ ರಾಡಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಜಾನ್ಸನ್ ಗಲ್ಬಾವೋ ರವರು ತಲೆಗೆ ತೀವ್ರ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.