ಪಟ್ರಮೆ: ‘ಗ್ರಾಮ ಚದುರಂಗ ಆಟ ಆಡೋಣ’ ಅಭಿಯಾನ ➽ ತಾಲೂಕು ಮಟ್ಟಕ್ಕೆ ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಸುನೀತ್ ಆಯ್ಕೆ

ಶೇರ್ ಮಾಡಿ

ನೇಸರ ಆ.03: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ ಸಹಯೋಗದಲ್ಲಿ ಪಟ್ರಮೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ 75ನೇ ಅಮೃತ ಮಹೋತ್ಸವದ ಪ್ರಯುಕ್ತ ಪಂಚಾಯತ್ ನ ಗ್ರಂಥಾಲಯದ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ‘ಗ್ರಾಮ ಚದುರಂಗ ಆಟ ಆಡೋಣ’ ಅಭಿಯಾನವು ಪಟ್ರಮೆ ಪಂಚಾಯತ್ ನ ಗ್ರಂಥಾಲಯದಲ್ಲಿ ಆಗಸ್ಟ್ 3ರಂದು ನಡೆಯಿತು.

ಕಾರ್ಯಕ್ರಮವನ್ನು ಪಟ್ರಮೆ ಪಂಚಾಯತ್ ಅಧ್ಯಕ್ಷೆ ಮೋಹಿನಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಿತೇಶ್ ಪುತ್ರನ್ ಮಾತನಾಡಿ, ಕೋರೋನ ನಂತರ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚಲು, ಹಾಗೂ ಕರೋನಾ ಸಮಯದಲ್ಲಿ ಕಳೆದುಕೊಂಡ ಆಟ ಪಾಠಗಳ ಮರು ಪಡೆಯುವಿಕೆಗೆ ಸರ್ಕಾರದಿಂದ ನಡೆಸಲ್ಪಡುವ ಇಂತಹ ಕಲಿಕಾ ಪೂರಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸಹಕಾರಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಾಗಲಿ ಎಂದರು.

ವೇದಿಕೆಯಲ್ಲಿ ಪಂಚಾಯತ್ ಕಾರ್ಯದರ್ಶಿ ಅಮ್ಮಿ ಬಿ.ಪಿ. ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕಿ ವಿದ್ಯಾಸರಸ್ವತಿ ಶಬರಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ತಾಲೂಕು ಮಟ್ಟಕ್ಕೆ ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಸುನೀತ್ ಆಯ್ಕೆ
ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿ ಸುನೀತ್ ಪಟ್ರಮೆ ಪಂಚಾಯತ್ ವ್ಯಾಪ್ತಿಯಿಂದ ತಾಲೂಕು ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಶ್ರೀರಾಮ ವಿದ್ಯಾ ಶಾಲೆ ಪಟ್ಟೂರು, ಸ. ಕಿ. ಪ್ರಾ.ಶಾಲೆ ಪಟ್ರಮೆ ‘ಬಿ’, ಸ. ಉ. ಹಿ. ಪ್ರಾ. ಶಾಲೆ ಪಟ್ರಮೆ ‘ಎ’ ಸ. ಕಿ. ಪ್ರಾ.ಶಾಲೆ ಬದಿಪಳಿಕೆ ಒಟ್ಟು 4 ಶಾಲೆಯ 8 ವಿದ್ಯಾರ್ಥಿಗಳು ಗ್ರಾಮಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಅಂತಿಮವಾಗಿ ಶ್ರೀರಾಮ ವಿದ್ಯಾ ಸಂಸ್ಥೆಯ ಸುನೀತ್ ಪ್ರಥಮ, ಶ್ರೀರಾಮ ವಿದ್ಯಾ ಸಂಸ್ಥೆಯ ಪ್ರಸಾದ್ ದ್ವಿತೀಯ, ಹಾಗೂ ಸ. ಉ. ಹಿ. ಪ್ರಾ. ಶಾಲೆ ಪಟ್ರಮೆ ‘ಎ’ ಶಾಲೆಯ ಜೀವಂತ್ ತೃತೀಯ ಸ್ಥಾನ ಪಡೆದುಕೊಂಡರು.

Leave a Reply

error: Content is protected !!