ರಾಷ್ಟ್ರ ಕಟ್ಟುವುದು ಎಲ್ಲರ ಜವಾಬ್ದಾರಿ : ಪ್ರೊ.ದಿನೇಶ್ ಚೌಟ

ಶೇರ್ ಮಾಡಿ

ನೇಸರ ಆ.08: ಸ್ವಾತಂತ್ರ‍್ಯದ 75 ವರ್ಷಗಳಲ್ಲಿ ಭಾರತೀಯರು ಸಾಕ್ಷರತೆ,ಆರೋಗ್ಯ ಸುಧಾರಣೆ,ಆಯಸ್ಸು ಹಾಗು ಆರ್ಥಿಕ ಸಬಲೀಕರಣದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದೇವೆ. 21ನೇ ಶತಮಾನಕ್ಕೆ ಯುವಜನಾಂಗ ಜ್ಞಾನ, ಕೌಶಲ ಬೆಳೆಸಿಕೊಳ್ಳಬೇಕಾಗಿದೆ. ರಾಷ್ಟ್ರ ಕಟ್ಟುವಲ್ಲಿ ನಾವೆಲ್ಲ ಜವಾಬ್ದಾರಿಯುತ ಹೊಣೆಗಾರರಾಗಬೇಕು ಎಂದು ಉಜಿರೆ ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ದಿನೇಶ್ ಚೌಟ ಹೇಳಿದರು.
ಅವರು ಶನಿವಾರ ಉಜಿರೆ ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ದಿವ್ಯಾಕುಮಾರಿ ಮಾತನಾಡಿ ಸ್ವಾತಂತ್ರ‍್ಯ ಅಮೃತ ವರ್ಷಾಚರಣೆ ಅರ್ಥಪೂರ್ಣವಾಗಲು ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಜವಾಬ್ದಾರಿಯುತ ಸ್ವಯಂಸೇವಕರಾಗಿ ರಾಷ್ಟ್ರಾಭಿಮಾನದ ದ್ಯೋತಕವಾಗಿ ಪ್ರತಿ ಮನೆಗಳಲ್ಲಿ ಆ.13 ರಿಂದ 15 ರವರೆಗೆ ಅಹರ್ನಿಶಿ ರಾಷ್ಟ್ರಧ್ವಜಾರೋಹಣ ನಡೆಯುವಂತೆ ಮಾಹಿತಿ ನೀಡಿ ರಾಷ್ಟ್ರದ ಘನತೆ, ಗೌರವವನ್ನು ಎತ್ತಿಹಿಡಿಯಬೇಕು. ಪ್ಲಾಸ್ಟಿಕ್ ಧ್ವಜ ಹೊರತುಪಡಿಸಿ ರೇಷ್ಮೆ, ಉಣ್ಣೆ ಬಟ್ಟೆಯ ಧ್ವಜವು ನೆಲಕ್ಕೆ ತಾಗದಂತೆ, ಎಲ್ಲೆಂದರಲ್ಲಿ ಎಸೆಯದಂತೆ, ದುರುಪಯೋಗವಾಗದೆ ಜೋಪಾನವಹಿಸುವಂತೆ ನಾಗರಿಕರಿಗೆ ಜಾಗೃತಿಯ ಮಾಹಿತಿ ನೀಡಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಪ್ರಸನ್ನ ಕುಮಾರ್ ಐತಾಳ್ ಪ್ರಸ್ತಾವಿಕವಾಗಿ ಮಾತನಾಡಿ ರಾಷ್ಟ್ರದ 75 ನೇ ಸ್ವಾತಂತ್ರ‍್ಯ ವರ್ಷದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ 50ನೇ ವರ್ಷದಲ್ಲಿ ನಾನಾ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದು ರಾಷ್ಟ್ರಧ್ವಜ ಮಾಹಿತಿ ಅಭಿಯಾನದಲ್ಲಿ150 ಸ್ವಯಂ ಸೇವಕರ ತಂಡದಿಂದ ಉಜಿರೆ ಗ್ರಾಮದ ಮನೆ ಮನೆಗಳಿಗೆ ರಾಷ್ಟ್ರಧ್ವಜದ ಬಗೆಗೆ ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಆ.11ರ ಬಳಿಕ ಗ್ರಾಮ ಪಂಚಾಯತಿನಿಂದ ರಾಷ್ಟ್ರಧ್ವಜವನ್ನು ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಚೇತನಾ ಕುಮಾರಿ ಉಪಸ್ಥಿತರಿದ್ದರು.

Leave a Reply

error: Content is protected !!