ನೇಸರ ಆ.09: ಕಡಬ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯತ್‌ಗಳ ಗ್ರಂಥಾಲಯಗಳ ಓದುವ ಬೆಳಕು ಕಾರ್ಯಕ್ರಮ ಅಂಗವಾಗಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನವನ್ನು ಪ್ರತಿ ಗ್ರಾಮ ಪಂಚಾಯತ್‌ಗಲ್ಲಿ ಏರ್ಪಡಿಸಿ ಗ್ರಾಮೀಣ ಮಕ್ಕಳಿಗೆ ಚದುರಂಗ ಆಟವನ್ನು ಏರ್ಪಡಿಸಲಾಗಿದೆ. ಈ ಆಟದಿಂದ ಮಕ್ಕಳಲ್ಲಿ ಬುದ್ದಿವಂತಿಕೆ ಮತ್ತು ಯೋಚನಾ ಶಕ್ತಿ ವೃದ್ಧಿಯಾಗುತ್ತದೆ. ಮಕ್ಕಳಿಗೆ ಶಾರೀರಿಕ ವ್ಯಾಯಾಮದ ಜೊತೆಗೆ ಮಾನಸಿಕ ವ್ಯಾಯಾಮವು ಈ ಕ್ರೀಡೆಯಿಂದ ಸಾಧ್ಯ ಎಂದು ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.
ಅವರು ಆ.8 ರಂದು ಕಡಬದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, ಈ ಸ್ಪರ್ಧೆಯಲ್ಲಿ ವಿಜೇತರಾದ ಮೂರು ಮಕ್ಕಳನ್ನು ಜಿಲ್ಲಾಮಟ್ಟಕ್ಕೆ ಕಳುಹಿಸಲಾಗುತ್ತದೆ. ಇಲ್ಲಿ ಸೋಲು-ಗೆಲುವು ಸಹಜ ಆದರೆ ಮಕ್ಕಳನ್ನು ಕ್ರಿಯಾಶೀಲ, ಯೋಚನಾಶೀಲರನ್ನಾಗಿ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಮಾತನಾಡಿ, ಕೊರೊನಾ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಮಕ್ಕಳು ವ್ಯಾಯಾಮವನ್ನೇ ಮರೆತು ಕೇವಲ ಮೊಬೈಲ್ ಆಟಗಳಿಗೆ ಸೀಮಿತರಾಗಿದ್ದಾರೆ. ಮೊಬೈಲ್‌ನಿಂದ ಹೊರಬಂದು ಮಕ್ಕಳ ಮೆದುಳಿಗೆ ಕೆಲಸಕೊಡುವಂತಹ ಚೆಸ್ ಸ್ಪರ್ಧೆಯನ್ನು ಏರ್ಪಡಿಸಲು ಇಲಾಖೆ ಮುಂದಾಗಿದೆ ಎಂದರು.
ವೇದಿಕೆಯಲ್ಲಿ ಕಡಬ ತಾ.ಪಂ. ಸಹಾಯಕ ನಿರ್ದೇಶಕರು (ಗ್ರಾ.ಉ.) ಚೆನ್ನಪ್ಪ ಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘದ ಅಧ್ಯಕ್ಷರಾದ ಜೆರಾಲ್ಡ್ ಮಸ್ಕರೇನ್ಹಸ್, ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಹಮೀದ್, ತೀರ್ಪುಗಾರರಾದ ಪಡುಬೆಟ್ಟು ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪ, ಮೇರ್ಲ ಸರಕಾರಿ ಹಿ.ಪ್ರಾ.ಶಾಲೆ ಸಹ ಶಿಕ್ಷಕ ಗಿರೀಶ್, ದೇರಾಜೆ ಸರಕಾರಿ ಪ್ರೌಢಶಾಲೆ ಸಹಶಿಕ್ಷಕ ಸುಧೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್‌ನ ವ್ಯವಸ್ಥಾಪಕರಾದ ಆನಂದ ಗೌಡ ಸ್ವಾಗತಿಸಿದರು. ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್ ಪ್ರಸ್ತಾವನೆಗೈದರು. ನರೇಗಾ ತಾಲೂಕು ಐಇಸಿ ಸಂಯೋಜಕ ಭರತ್ ರಾಜ್ ಕೆ. ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಕಡಬ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಸಹಾಯಕ ನಿರ್ದೇಶಕರು (ಗ್ರಾ.ಉ.) ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ಅವಿನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್, ತೀರ್ಪುಗಾರರಾದ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್, ಪಡುಬೆಟ್ಟು ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪ, ಮೇರ್ಲ ಸರಕಾರಿ ಹಿ.ಪ್ರಾ.ಶಾಲೆ ಸಹ ಶಿಕ್ಷಕ ಗಿರೀಶ್, ದೇರಾಜೆ ಸರಕಾರಿ ಪ್ರೌಢಶಾಲೆ ಸಹಶಿಕ್ಷಕ ಸುಧೀರ್ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರಧಾನ
ತಾಲೂಕು ಮಟ್ಟದ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದ ಪ್ರಥಮ ಸ್ಥಾನವನ್ನು ನೆಲ್ಯಾಡಿ ಗ್ರಾಮ ಪಂಚಾಯತ್ ನ ನೆಲ್ಯಾಡಿ ಸಂತ ಜಾರ್ಜ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮಧುಶ್ರೀ ಎಲ್., ದ್ವಿತೀಯ ಸ್ಥಾನವನ್ನು ಕೌಕ್ರಾಡಿ ಗ್ರಾಮ ಪಂಚಾಯತ್‌ನ ನೇರ್ಲ ಇಚ್ಲಂಪಾಡಿ ಸರಕಾರಿ ಉನ್ನತ ಹಿ.ಪ್ರಾ. ಶಾಲೆಯ ವಿದ್ಯಾರ್ಥಿನಿ ರೇಷ್ಮಾ ಎನ್., ತೃತೀಯ ಸ್ಥಾನವನ್ನು ಕಡ್ಯ ಕೊಣಾಜೆ ಗ್ರಾಮ ಪಂಚಾಯತ್ ನ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಲಾವಣ್ಯ ಪಿ., ಚತುರ್ಥ ಸ್ಥಾನವನ್ನು ಕೊಯಿಲ ಗ್ರಾಮ ಪಂಚಾಯತ್‌ನ ವಳಕಡಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಧನೀಷ್ ಕೆ. ಪಡೆದುಕೊಂಡರು. ಮೂರು ಮಂದಿ ವಿಜೇತರು ಆ.೧೨ ರಂದು ಮಂಗಳೂರು ತಾ.ಪಂ. ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.