ನೇಸರ ಆ.10: ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಪ್ರಯುಕ್ತ ಮನೆ ಮನೆಗೆ ರಾಷ್ಟ್ರಧ್ವಜ ಪರಿಕಲ್ಪನೆಗೆ ಗ್ರಾಮ ಮಟ್ಟದಲ್ಲಿ ಅದ್ದೂರಿ ತಯಾರಿ ನಡೆದಿದೆ. ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಜನರೊಂದಿಗೆ ಪೂರ್ವಭಾವಿ ಸಭೆ ನಡೆಸಿದ್ದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನೆ ಮನೆಗೆ ರಾಷ್ಟ್ರಧ್ವಜ ಹಂಚುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆಗಸ್ಟ್ 13ರ ಬೆಳಗ್ಗಿನಿಂದ ಆಗಸ್ಟ್ 15 ರ ಸಂಜೆಯವರೆಗೆ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಾಡುವಂತೆ ತಯಾರಿ ನಡೆಸಲಾಗುತ್ತಿದೆ.
ರಾಷ್ಟ್ರಧ್ವಜವೊಂದಕ್ಕೆ 25 ರೂ ನಿಂದ 30 ರೂ ನಿಗದಿ ಮಾಡಿ ಪಂಚಾಯತ್, ಸಹಕಾರಿ ಬ್ಯಾಂಕ್, ಅಂಚೆ ಕೇಂದ್ರ, ಶಿಕ್ಷಣ ಸಂಸ್ಥೆಗಳ ಮೂಲಕ ಮನೆ ಮನೆಗಳಿಗೆ ತಲುಪಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಈ ಮಧ್ಯೆ ಗ್ರಾಮದ ಕೆಲವು ಪಂಚಾಯತ್‌ಗಳಲ್ಲಿ ಬೇಡಿಕೆ ಅಧಿಕವಾಗಿದ್ದು ಪೂರೈಕೆಗಾಗಿ ಪಂಚಾಯತ್ ಅಧಿಕಾರಿಗಳು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳತ್ತ ಮೊರೆ ಹೋಗುತ್ತಿದ್ದಾರೆ. ಜೊತೆ ಜೊತೆಗೆ ರಾಷ್ಟ್ರಧ್ವಜ ಹಾರಾಟದ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ರಾಷ್ಟ್ರಧ್ವಜಕ್ಕೆ ಅಪಮಾನವಾದಲ್ಲಿ ಕಠಿಣ ಶಿಕ್ಷೆ ಜಾರಿಯಾಗುವ ಬಗ್ಗೆಯೂ ತಿಳಿಸಲಾಗುತ್ತಿದೆ. ಹೊಸ ಕಲ್ಪನೆಗೆ ಭಿನ್ನ-ಭಿನ್ನ ಸ್ಪಂದನೆ ದೊರೆಕುತ್ತಿರುವುದರಿಂದ ಈ ಬಾರಿಯ ಮನೆಮನೆಗೆ ರಾಷ್ಟ್ರಧ್ವಜ ಸಂಭ್ರಮ ಕುತೂಹಲ ಹಾಗೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಹೊಸ ಅನುಭವವನ್ನು ಸೃಷ್ಟಿ ಮಾಡುತ್ತಿದೆ. ರಾಷ್ಟ್ರಧ್ವಜ ಹಾರಾಡಿಸುವ ಪರಿಕಲ್ಪನೆ ಕಡ್ಡಾಯ ವಾಗಿರುವುದಿಲ್ಲ.
ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಪಂಚಾಯತ್ ಈಗಾಗಲೇ ಗರಿಷ್ಟ ಮಟ್ಟದಲ್ಲಿ ಧ್ವಜ ಪೂರೈಸುವ ಹೊಣೆ ಹೊತ್ತಿದೆ.
ಗ್ರಾಮ ➙ ಮನೆ ➙ ರಾಷ್ಟ್ರಧ್ವಜ
ಕೊಕ್ಕಡ ➙ 1443 ➙ 800
ಪಟ್ರಮೆ ➙ 657 ➙ 200
ನಿಡ್ಲೆ ➙ 900 ➙ 450
ಶಿಶಿಲ ➙ 492 ➙ 70
ಅರಸಿನಮಕ್ಕಿ ➙ 1253 ➙ 450
3 ದಿನ ರಾಷ್ಟ್ರಧ್ವಜ ಹೇಗೆ ಹಾರಾಡಬೇಕು
ಮನೆಯ ಮುಂಭಾಗದ ಸ್ತಂಭದಲ್ಲಿ ನೇರವಾಗಿ ಧ್ವಜವನ್ನು ಹಾರಾಡಿಸಬೇಕು. ತುಳಸಿ ಕಟ್ಟೆಯ ಸಮೀಪ ರಾಷ್ಟ್ರಧ್ವಜವನ್ನು ಹಾರಾಡಿಸಬಹುದು. ಕೇಸರಿ ಬಣ್ಣ ಮೇಲ್ಭಾಗ ಹಾಗೂ ಹಸಿರು ಬಣ್ಣ ಕೆಳ ಭಾಗವಾಗಿ ಇರಬೇಕು. ಯಾವುದೇ ಕಾರಣಕ್ಕೂ ಧ್ವಜ ವಾಲಿಕೊಂಡು ಇರಬಾರದು ನೇರವಾಗಿಯೇ ಹಾರಾಡುವಂತೆ ನೋಡಿಕೊಳ್ಳಬೇಕು. ಆ.13ನೇ ತಾರೀಖಿನ ಸೂರ್ಯೋದಯದ ಸಮಯದಲ್ಲಿ ಧ್ವಜವನ್ನು ಹಾರಾಡಿಸಿದರೆ, ಆ.15ರ ಸೂರ್ಯಾಸ್ತಮಾನದ ಸಮಯದಲ್ಲಿ ಧ್ವಜವನ್ನು ತೆಗೆದು ಸುರಕ್ಷಿತವಾಗಿಟ್ಟುಕೊಳ್ಳಬೇಕು. ರಾಷ್ಟ್ರಧ್ವಜಕ್ಕಿಂತ ಎತ್ತರವಾಗಿ ಯಾವುದೇ ಉಳಿದ ದ್ವಜ ಹಾರಾಡದಂತೆ ಜಾಗೃತೆ ವಹಿಸಬೇಕು. ರಾಷ್ಟ್ರಧ್ವಜ ನೆಲಕ್ಕೆ ತಾಗದಂತೆ ನಿಗಾವಹಿಸಬೇಕು. ಆ.15ರ ನಂತರ ಆಯಾಯ ಮನೆಗಳಲ್ಲೇ ಧ್ವಜವನ್ನು ಸುರಕ್ಷಿತವಾಗಿ ತೆಗೆದಿಡಬೇಕು. ಮನೆಯ ಗೋಡೆಗಳಲ್ಲಿ ಅಥವಾ ಬೇರಾವುದೇ ಕಡೆಗಳಲ್ಲಿ ಹಾರಾಡಿಸಬಾರದು. ಮನೆಯಲ್ಲಿ ಸುರಕ್ಷಿತವಾಗಿ ಇಡಲು ಸಾಧ್ಯವಾಗದವರು ಆ.15ರ ನಂತರ ಮರಳಿ ಪಂಚಾಯತ್‌ಗೆ ಧ್ವಜವನ್ನು ಹಿಂತಿರುಗಿಸಬಹುದು. ಧ್ವಜಕ್ಕೆ ಅವಮಾನ ಆಗಬಾರದು ಅನ್ನುವುದಷ್ಟೇ ಇದರ ಉದ್ದೇಶ. ಒಂದು ವೇಳೆ ರಾಷ್ಟ್ರಧ್ವಜಕ್ಕೆ ಯಾರಿಂದಾದರೂ ಅವಮಾನವಾದಲ್ಲಿ ಅವರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆಯಾಗಲಿದೆ.
ಸವಾಲುಗಳ ಜೊತೆ ಸಾಕಷ್ಟು ಮುಂಜಾಗ್ರತೆ, ಜಾಗೃತಿ
ರಾಷ್ಟ್ರಧ್ವಜದ ಬಗ್ಗೆ ಗ್ರಾಮೀಣ ಭಾಗದಲ್ಲಿ ಅವಶ್ಯಕ ಮಾಹಿತಿಗಾಗಿ ಗ್ರಾಮಸ್ಥರಿಗೆ ವಿದ್ಯಾರ್ಥಿಗಳ ಮೂಲಕ ಶಿಕ್ಷಕರು ಮಾಹಿತಿ ನೀಡುತ್ತಿದ್ದಾರೆ, ಪಂಚಾಯತ್ ವ್ಯಾಪ್ತಿಯ ವಾರ್ಡ್ ಸದಸ್ಯರು, ಪಂ.ಅಭಿವೃದ್ದಿ ಅಧಿಕಾರಿಗಳ ಮೂಲಕ ಗ್ರಾಮದ ಎಲ್ಲಾ ಮನೆಗೆ ಮಾಹಿತಿಯನ್ನು ನೀಡಲಾಗುತ್ತಿದೆ. 3 ದಿನಗಳೊಳಗೆ ಗ್ರಾಮದ ಜನರಿಗೆ ಧ್ಜಜ ಪೂರೈಸುವುದರ ಜೊತೆಗೆ ರಾಷ್ಟ್ರಧ್ವಜಕ್ಕೆ ಅವಮಾನವಾಗದೆ ಹಾರಾಟ ಮಾಡುವುದೇ ಈಗಿರುವ ಸವಾಲಾಗಿದೆ. ರಾಷ್ಟ್ರಧ್ವಜ ಹಾರಾಟದ ಬಗ್ಗೆ ಸಾರ್ವಾಜನಿಕರಿಗೆ ಸಂದೇಹವಿದ್ದಲ್ಲಿ ಆಯಾಯ ಗ್ರಾಮದ ವಾರ್ಡ್ ಸದಸ್ಯರು ಅಥವಾ ಪಿಡಿಒ ಅವರನ್ನು ಸಂಪರ್ಕಿಸಬಹುದು.
ರಾಷ್ಟ್ರಾಭಿಮಾನದ ಜೊತೆ ಪ್ರಮಾಣ ಪತ್ರ
ಮನೆಮನೆಗೆ ರಾಷ್ಟ್ರಧ್ವಜ ಹಾರಾಡುವ ಸಂದರ್ಭ ಸಾರ್ವಾಜನಿಕರು ರಾಷ್ಟ್ರಧ್ವಜದೊಂದಿಗೆ ಸೆಲ್ಫಿ ತೆಗೆದು http://harghartiranga.com ಗೆ ಅಪ್ಲೋಡ್ ಮಾಡಿದರೆ ಆ.15ರಂದು ರಾಷ್ಟ್ರಧ್ವಜ ಹಾರಾಡಿಸಿದರ ಪರವಾಗಿ ಪ್ರಮಾಣಪತ್ರ ಲಭಿಸಲಿದೆ.