ಜ್ಞಾನವನ್ನು ಅಗತ್ಯವಿರುವಲ್ಲಿ ಬಳಸಿಕೊಳ್ಳದೇ ಇದ್ದರೆ ಪಡೆದ ಶಿಕ್ಷಣ ವ್ಯರ್ಥ :ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ

ಶೇರ್ ಮಾಡಿ

ನೇಸರ ಆ.11: ಜ್ಞಾನಾರ್ಜನೆಯೊಂದೇ ಶಿಕ್ಷಣದ ಏಕೈಕ ಉದ್ದೇಶವಲ್ಲ. ಪಡೆದ ಜ್ಞಾನವನ್ನು ಅಗತ್ಯವಿರುವಲ್ಲಿ ಬಳಸಿಕೊಳ್ಳದೇ ಇದ್ದರೆ ಪಡೆದ ಶಿಕ್ಷಣ ವ್ಯರ್ಥ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆ, ಕೌಶಲವನ್ನು ಗುರುತಿಸಿ ಪೋಷಿಸಿದಾಗ ಅದು ವರವಾಗಿ ಪರಿಣಮಿಸುತ್ತದೆ ಎಂದು ರಾಜ್ಯಸಭೆಯ ನೂತನ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.
ಉಜಿರೆ ಎಸ್‌ಡಿಎಂ ಕಾಲೇಜು ವತಿಯಿಂದ ಬುಧವಾರ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿ ಮಾತನಾಡಿದರು.
ಅಧ್ಯಯನದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಬದ್ಧತೆಯಿದ್ದಾಗ ಸಾಧನೆಯ ಹಾದಿ ಸ್ಪಷ್ಟವಾಗುತ್ತದೆ. ವ್ಯಕ್ತಿಗತ ಜ್ಞಾನ, ಕೌಶಲಗಳಿಗೆ ಸಂಸ್ಕಾರಯುತ ನಡವಳಿಕೆಯಿಂದ ಹೊಸದೊಂದು ಆಯಾಮ ದೊರಕುತ್ತದೆ. ಖಾಸಗಿ ಅಥವಾ ಸರಕಾರಿ ವಲಯಗಳಲ್ಲಿ ಕಾರ್ಯೋನ್ಮುಖ ರಾಗಿರುವಾಗ ಇನ್ನೊಬ್ಬರೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದೇ ಮುಖ್ಯವಾಗುತ್ತದೆ. ಸೌಜನ್ಯದ ನಡವಳಿಕೆ ವೃತ್ತಿ ಜೀವನದ ಬೆಳವಣಿಗೆಗೆ ಪೂರಕವಾಗುತ್ತವೆ. ಈ ಬಗೆಯ ತಿಳುವಳಿಕೆಯಿಂದ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಶಾಸಕ ಹರೀಶ್‌ ಪೂಂಜ ಮಾತನಾಡಿ, ಪದವಿ ಪೂರ್ಣಗೊಳ್ಳುವುದಕ್ಕೆ ಮುಂಚೆಯೇ ಸಾಧನೆಯ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಹಂಬಲಗಳನ್ನಿರಿಸಿಬೇಕು. ಸ್ಪರ್ಧಾತ್ಮಕ ಜಗತ್ತಿನ ವೇಗಕ್ಕೆ ತಕ್ಕಂತೆ ಸಾಮರ್ಥ್ಯ ಹೆಚ್ಚಿಸಿಕೊಂಡಾಗ ಸಾಧನೆ ನಿಶ್ಚಿತವಾಗುತ್ತದೆ. ಉಜಿರೆಯ ಸರ್ವತೋಮುಖ ಪ್ರಗತಿಗೆ ಡಾ| ಬಿ.ಯಶೋವರ್ಮರ ಪ್ರಯೋಗಶೀಲ ಪ್ರಯತ್ನವನ್ನು ಸ್ಮರಿಸುತ್ತೇನೆ ಎಂದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್‌ ಮತ್ತು ಡಾ| ಎಸ್‌.ಸತೀಶ್ಚಂದ್ರ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲ ಡಾ|ಎ.ಜಯಕುಮಾರ್‌ ಶೆಟ್ಟಿ ವಾರ್ಷಿಕ ವರದಿ ಸಾದರ ಪಡಿಸಿದರು. ಪ್ರಾಂಶುಪಾಲ ಡಾ| ಪಿ.ಎನ್‌. ಉದಯಚಂದ್ರ ಸ್ವಾಗತಿಸಿದರು. ಕಲಾ ವಿಭಾಗ ಡೀನ್‌ ಡಾ| ಶಲೀಪ್‌ ಕುಮಾರಿ ವಂದಿಸಿದರು. ಪ್ರಾಧ್ಯಾಪಕ ಡಾ| ಕುಮಾರ್‌ ಹೆಗ್ಡೆ ಬಿ.ಎ. ಡಾ| ಚಿತ್ರಾ ಮತ್ತು ಡಾ| ನೆಫಿಸೆತ್‌ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸಮ್ಮಾನ
ರಾಜ್ಯಸಭಾ ಸದಸ್ಯರಾಗಿರುವ ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ಉಜಿರೆಯ ರಸ್ತೆಯನ್ನು ಸುಂದರಗೊಳಿಸಿರುವ ಶಾಸಕ ಹರೀಶ್‌ ಪೂಂಜ ಮತ್ತು ಎಸ್‌ಡಿಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಗುರುರಾಜ್‌ ಪೂಜಾರಿ ಅವರನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಿಸಿ ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿ ಗುರುರಾಜ್‌ ಮಾತನಾಡಿ, ನಿರ್ದಿಷ್ಟ ಗುರಿಯೊಂದಿಗೆ ಯಾವುದೇ ಕ್ಷೇತ್ರದಲ್ಲಿ ಕಠಿನ ಪರಿಶ್ರಮ ಮತ್ತು ನಿರಂತರ ಅಭ್ಯಾಸ ಮಾಡಿದಲ್ಲಿ ಯಶಸ್ಸು ಖಚಿತ. ಪದಕ ಗೆದ್ದು ಮರಳಿದಾಗ ಡಾ| ಹೆಗ್ಗಡೆಯವರು ವಿಮಾನ ನಿಲ್ದಾಣದಲ್ಲಿ ಗೌರವಿಸಿದ್ದು ಸಾರ್ಥಕ ಪುಣ್ಯ ಕ್ಷಣವಾಗಿದೆ. 2010 ರಿಂದ 5 ವರ್ಷಗಳ ಕಾಲ ನಾನು ಎಸ್‌ಡಿಎಂ ಕಾಲೇಜಿನಲ್ಲಿ ಪಡೆದ ತರಬೇತಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಮೇಶ್‌ ಎಚ್‌., ಶಾರದಾ ಮತ್ತು ರಾಜೇಂದ್ರ ಪ್ರಸಾದ್‌ ಅವರ ನಿರಂತರ ತರಬೇತಿ ಮತ್ತು ಪ್ರೋತ್ಸಾಹವೂ ಇದರ ಹಿಂದೆ ಇದೆ ಎಂದರು.

Leave a Reply

error: Content is protected !!