ನೇಸರ ಆ.14: ಭಗವಂತನ ಉಪಚಾರ ನಮ್ಮ ಸಂಪ್ರದಾಯ.ಅಷ್ಟ ಸೇವೆಗಳಲ್ಲಿ ಸಂಗೀತವು ಒಂದು.ಬೌದ್ಧಿಕ, ಲೌಕಿಕ ವ್ಯವಸ್ಥೆಗಳ ಜತೆ, ರಾಗಗಳಿಗೆ ತಕ್ಕ ಗೌರವಯುತ ಸೇವೆಯು ದೇವರ ಅನುಗ್ರಹಕ್ಕೆ ಪಾತ್ರವಾಗುತ್ತದೆ. ಭಕ್ತರಿಗೆ ತೃಪ್ತಿಯಾದರೆ ಭಗವಂತನಿಗೂ ತೃಪ್ತಿ ಯಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು, ಸುರತ್ಕಲ್ ನ ಮಣಿಕೃಷ್ಣ ಅಕಾಡೆಮಿ ಆಶ್ರಯದಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ರಚಿಸಿ ಪ್ರಕಟಿಸಿದ ‘ಮಂಜುನಾದ’ ಕೃತಿಗಳನ್ನು ಭಾನುವಾರ ಧರ್ಮಸ್ಥಳದ ವಸಂತ ಮಹಲ್ ನಲ್ಲಿ ಲೋಕಾರ್ಪಣೆಗಳಿಸಿ ಮಾತನಾಡಿದರು.
ಖ್ಯಾತ ಸಂಗೀತ ಕಲಾವಿದ ಡಾ. ರಾಜಕುಮಾರ್ ಭಾರತೀ ಅವರು ಗೌರವಯುತ ಸಾಹಿತ್ಯದ ಮೂಲಕ ಶ್ರೀ ಮಂಜುನಾಥ ಸ್ವಾಮಿಯ ಕುರಿತು ರಚಿಸಿದ ಶಾಸ್ತ್ರೀಯ ಗೀತೆಗಳು ಉತ್ತಮವಾಗಿ ಮೂಡಿಬಂದಿದ್ದು, ಕನ್ನಡದಲ್ಲಿ ರಚಿಸಿದ ಶಾಸ್ತ್ರೀಯ ಸಂಗೀತ ಕೃತಿಗಳು ಶ್ರೀ ಸ್ವಾಮಿಗೆ ಅಪೂರ್ವ ಸೇವೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಬಿ.ಸುಬ್ರಮಣ್ಯ ಎಡಪಡಿತ್ತಾಯ ಮಾತನಾಡಿ ಪುಣ್ಯಕ್ಷೇತ್ರಗಳ ಬಗ್ಗೆ ಶಾಸ್ತ್ರೀಯ ಸಂಗೀತದ ಕೃತಿಗಳನ್ನು ಪ್ರಕಟಿಸುವುದು ಸ್ತುತ್ಯರ್ಹ. ಧರ್ಮಸ್ಥಳ ಕ್ಷೇತ್ರದಿಂದ ಆರಂಭಗೊಂಡ ಈ ಕಾರ್ಯ ಯಶಸ್ವಿಯಾಗಲಿ. ಪ್ರೀತಿ, ವಿಶ್ವಾಸ ಹಾಗೂ ದೃಢ ಭಕ್ತಿಯಿಂದ ಶಾಸ್ತ್ರೀಯ ಸಂಗೀತ ಹಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವರ್ಧನೆಯೊಂದಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಉಡುಪಿಯ ಪ್ರೊ.ಅರವಿಂದ ಹೆಬ್ಬಾರ್ ಮತ್ತು ಡಾ.ರಾಜ್ ಕುಮಾರ್ ಭಾರತಿ ಶುಭ ಹಾರೈಸಿದರು. ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೆಂದ್ರ ಕುಮಾರ್, ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು. ಮಣಿಕೃಷ್ಣ ಅಕಾಡೆಮಿ ಅಧ್ಯಕ್ಷ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಕಾರ್ಕಳದ ಡಾ. ಅರುಣ್ ಕುಮಾರ್ ಎಸ್.ಆರ್.ವಂದಿಸಿದರು. ಉಡುಪಿಯ ರಾಮಾಂಜನೇಯ ಮತ್ತು ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
NESARA|| WhatsApp ||GROUPS |
---|