ನೋವುಂಟು ಮಾಡದೆ ಒಗ್ಗಟ್ಟಿನಿಂದ ನಡೆದರೆ ದೇಶದ ಮುನ್ನಡೆ ಸಾಧ್ಯ – ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ

ಶೇರ್ ಮಾಡಿ

ನೇಸರ ಆ.16:ಮಾನವೀಯತೆ, ಪ್ರಬುದ್ಧತೆಯ ಬದುಕಿನೊಂದಿಗೆ ಭಾವನಾತ್ಮಕ ಪ್ರತಿಕ್ರಿಯೆಯ ಸಾಮರಸ್ಯವನ್ನು ಸಮಾಜದಲ್ಲಿ ಬಿಂಬಿಸಬೇಕು. ಅಸಂತುಷ್ಟಿ, ಅಸಮಾಧಾನ, ಅಸಹಕಾರಗಳನ್ನು ತೋರದೆ ಮುನ್ನಡೆಯ ಬೇಕು. ಸಂಘರ್ಷ ಪ್ರವೃತ್ತಿಯ ಮೂಲಕ ಯಾರಿಗೂ ನೋವುಂಟು ಮಾಡದೆ ಒಗ್ಗಟ್ಟಿನಿಂದ ನಡೆದರೆ ದೇಶದ ಮುನ್ನಡೆ ಸಾಧ್ಯ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಸಿಯೋನ್ ಆಶ್ರಮ ಟ್ರಸ್ಟ್ ವತಿಯಿಂದ ನಡೆದ ತಾಲೂಕಿನ 75 ವರ್ಷ ದಾಟಿದ ಹಿರಿಯ ನಾಗರಿಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರದ್ಧಾಕೇಂದ್ರಗಳು ಮಕ್ಕಳಲ್ಲಿ ಮೌಲ್ಯಯುತ ವಿಚಾರಗಳ ಮೂಲಕ ಪ್ರೀತಿ, ಗೌರವ, ಪ್ರಕೃತಿ ಬಾಂಧವ್ಯಗಳನ್ನು ಬಿಂಬಿಸಿ ದೇಶಪ್ರೇಮವನ್ನು ಮೆರೆಯಲು ಪ್ರೇರಣೆ ನೀಡಬೇಕು. ಅನಾಥರ, ದೀನರ, ದುಃಖಿತರ ಬದುಕಿಗೆ ಆಶ್ರಯ ನೀಡುವ ಸಿಯೋನ್ ಆಶ್ರಮದ ಸೇವೆ ಅನನ್ಯವಾದುದು. ಇಲ್ಲಿನ ಚಟುವಟಿಕೆಗಳು ನಿರಂತರವಾಗಿ ಸಾಗಿ ಆಶ್ರಮವಾಸಿಗಳ ಜೀವನದ ನೆಮ್ಮದಿಗೆ ಕಾರಣವಾಗಲಿ ಎಂದು ಹೇಳಿದರು.
ಬೆಳ್ತಂಗಡಿ ಧರ್ಮ ಕೇಂದ್ರದ ಫಾ.ಜೋಸ್ ವಲೀಯಪರಂಬಿಲ್ ಮಾತನಾಡಿ ಎಲ್ಲರನ್ನೂ ಸಮಾನವಾಗಿ ಕಾಣುವ ಭಾರತ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು. ಎಲ್ಲ ಧರ್ಮೀಯರ ಆಚಾರ, ವಿಚಾರಗಳಿಗೆ ಸಮಾನ ಗೌರವವಿದೆ. ಭ್ರಷ್ಟಾಚಾರ ನಿರ್ಮೂಲನೆ ಮೂಲಕ ಸ್ವಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದರು.

NESARA|| WhatsApp ||GROUPS

                             

 

                                                       

 

ಎಂ ಎಲ್ ಸಿ ಪ್ರತಾಪಸಿಂಹ ನಾಯಕ್ ಮಾತನಾಡಿ, ದೇಶ ನನ್ನದೆನ್ನುವ ಭಾವನೆ ಜಾಗೃತವಾಗಿರಬೇಕು. ಬದುಕಿಗೆ ಮಾರ್ಗದರ್ಶನ ನೀಡುವ ಹಿರಿಯರನ್ನು ಗೌರವಿಸಬೇಕು. ಪರಸ್ಪರ ಪ್ರೀತಿ ನಂಬಿಕೆ, ಒಗ್ಗಟ್ಟಿನಿಂದ ವೈವಿಧ್ಯತೆಯಲ್ಲಿ ಏಕತೆ ಸಾರುವ ಮೂಲಕ ನಮ್ಮ ದೇಶದ ಕೀರ್ತಿಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುವ ಕೆಲಸ ನಡೆದಿದೆ ಎಂದರು.
ಮ್ಯಾನೇಜಿಂಗ್ ಟ್ರಸ್ಟಿ ಡಾ.ಯು.ಸಿ.ಪೌಲೋಸ್ ಅಧ್ಯಕ್ಷತೆ ವಹಿಸಿದ್ದರು. ಸುನ್ನಿ ಯುವಜನ ಸಂಘದ ಅಧ್ಯಕ್ಷ ಡಾ. ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿ, ಎಸ್.ಕೆ.ಡಿ.ಆರ್. ಡಿ.ಪಿ.ಯ ಸತೀಶ ಶೆಟ್ಟಿ, ಟ್ರಸ್ಟ್ ಸದಸ್ಯೆ ಮೇರಿ ಯು.ಪಿ., ಸದಸ್ಯರಾದ ತೋಮಸ್ ಎಂ.ಪಿ., ಸುಭಾಷ್ ಯು.ಪಿ, ತಾಲೂಕು ನಿವೃತ್ತ ವೈದ್ಯಾಧಿಕಾರಿ ಡಾ. ಕಲಾಮಧು, ಡೆನ್ನಿಸ್ ಮಸ್ಕರೇನಸ್, ಆಸೀಫ್ ಉಪಸ್ಥಿತರಿದ್ದರು.
ನಿವೃತ್ತ ಸೇನಾಧಿಕಾರಿ ಎಂ.ವಿ.ಭಟ್ ಧ್ವಜಾರೋಹಣ ನೆರವೇರಿಸಿದರು
ಗಂಡಿ ಬಾಗಿಲು ಸೈಂಟ್ ತೋಮಸ್ ಚರ್ಚ್ ನ ಧರ್ಮಗುರು ಫಾ. ಮ್ಯಾಥ್ಯೂ ವೆಟ್ಟಂತಡತ್ತಿಲ್ ಸ್ವಾಗತಿಸಿದರು. ಆಡಳಿತಾಧಿಕಾರಿ ಶೋಭಾ ಯು.ಪಿ. ವಂದಿಸಿದರು.

Leave a Reply

Your email address will not be published. Required fields are marked *

error: Content is protected !!