ದೇಶ ಅಖಂಡವಾಗುವ ಕಾಲ ಕೂಡಿ ಬಂದಿದೆ -ಉಲ್ಲಾಸ್ ಕೆ.ಟಿ.

ಶೇರ್ ಮಾಡಿ

ನೇಸರ ಆ.17: ಭಾರತ ವಿಶ್ವವಂದಿತವಾಗುತ್ತಿದೆ, ಬದಲಾವಣೆಯ ಪರ್ವದ ಪಥದಲ್ಲಿ ಸಾಗುತ್ತಿದೆ, ಇಂತಹ ಕಾಲಘಟ್ಟದಲ್ಲಿ ತ್ರಿಖಂಡವಾಗಿರುವ ದೇಶ ಅಖಂಡವಾಗುವ ಕಾಲ ಕೂಡಿ ಬಂದಿದೆ ಎಂದು ಹಿಂದೂ ಜಾಗರಣೆ ವೇದಿಕೆಯ ಪ್ರಾಂತ ಸಮಿತಿ ಸದಸ್ಯ ಉಲ್ಲಾಸ್ ಕೆ.ಟಿ. ಹೇಳಿದರು.
ಅವರು ಕಡಬ ತಾಲೂಕು ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಪಂಜಿನ ಮೆರವಣಿಗೆಯ ಬಳಿಕ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಜರಗಿದ ಯೋಧ ನಮನ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಭಾರತವನ್ನು ಅಖಂಡವನ್ನಾಗಿಸುವ ನಮ್ಮೆಲ್ಲರ ದಶಕಗಳ ಕನಸು ಕೈಗೂಡುತ್ತಿದೆ ಎಂದು ಹೇಳಿದ ಉಲ್ಲಾಸ್ ಶೆಟ್ಟಿ ಭಾರತದಿಂದ ಇತರ ದೇಶಗಳಿಗೆ ಹೋದವರೆಲ್ಲರೂ ಅಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಬೆಳಕನ್ನು ಚೆಲ್ಲಿ ಬಂದಿರುವ ಉದಾತ್ತ ಇತಿಹಾಸ ನಮ್ಮದು. ಶತ್ರುಗಳನ್ನು ಹಿಮ್ಮೆಟ್ಟಿಸಿ ದೇಶವನ್ನು ಸುರಕ್ಷಿತವಾಗಿರಿಸಲು ಎಲ್ಲಾ ರೀತಿಯ ತ್ಯಾಗಗಳನ್ನು ಮಾಡುವ ಗಡಿ ಕಾಯುವ ಸೈನಿಕರು ನಮಗೆ ಆದರ್ಶವಾಗಬೇಕು. ಈಗಾಗಲೇ ವಿಭಜನೆಯಾಗಿರುವ ಭರತ ಖಂಡವನ್ನು ಮತ್ತೆ ಅಖಂಡವಾಗಿಸುವ ಸಂಕಲ್ಪ ನಮ್ಮೆಲ್ಲರದಾಗಬೇಕು. ದೇಶದ ಹೊರಗಿನಿಂದ ವಿದೇಶದ ಶತ್ರುಗಳ ದಾಳಿ ನಡೆದರೆ ದೇಶದಲ್ಲಿನ ಆಂತರಿಕ ಶತ್ರುಗಳು ದೇಶವನ್ನು ಅಸ್ಥಿರಗೊಳಿಸುವ ವಿವಿಧ ರೀತಿಯ ಷಡ್ಯಂತ್ರಗಳು ನಡೆಯುತ್ತಿವೆ. ಬಾಹ್ಯ ಶತ್ರುಗಳನ್ನು ಸೈನಿಕರು ಹಿಮ್ಮೆಟ್ಟಿಸಿದರೆ ದೇಶದೊಳಗಿನ ಶತ್ರುಗಳ ವಿರುದ್ಧ ನಾವು ಸೇನಾನಿಗಳಾಗಿ ಕೆಲಸ ಮಾಡಿ ದೇಶದ ರಕ್ಷಣೆ ಮಾಡಬೇಕಿದೆ ಎಂದರು.
ಪೆರಾಬೆ ದೇವರಗುಡ್ಡೆ ಶ್ರೀ ವಿಷ್ಣು ಮೂರ್ತಿ ಸೇವಾ ಟ್ರಸ್ಟ್ನ ಅಧ್ಯಕ್ಷ ರಾಮಚಂದ್ರ ಭಟ್ ಅತ್ರಿವನ ಅವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿಂಜಾವೇ ಜಿಲ್ಲಾ ಸಮಿತಿಯ ಅವಿನಾಶ್ ಪುರುಷರಕಟ್ಟೆ, ತಾಲೂಕು ಸಮಿತಿಯ ಜಿನಿತ್ ಮರ್ದಾಳ, ಮಲ್ಲೇಶ್ ಆಲಂಕಾರು ಉಪಸ್ಥಿತರಿದ್ದರು.

ಜಿಲ್ಲಾ ಸಮಿತಿಯ ರವೀಂದ್ರದಾಸ್ ಪೂಂಜ ಸ್ವಾಗತಿಸಿದರು. ಕರ್ನಾಟಕ ಪ್ರಾಂತ ಸಮಿತಿಯ ಸದಸ್ಯ ರವಿರಾಜ ಶೆಟ್ಟಿ ಕಡಬ ಪ್ರಸ್ತಾವನೆಗೈದರು. ಮೋಹನ್ ಕೊೈಲ ನಿರೂಪಿಸಿ, ಕಿರಣ್ ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಕಡಬದ ಎಪಿಎಂಸಿ ಪ್ರಾಂಗಣದ ಬಳಿಯಿಂದ ಸಾಗಿ ಬಂದ ಪಂಜಿನ ಮೆರವಣಿಗೆಯನ್ನು ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಅವರು ಉದ್ಘಾಟಿಸಿದರು.
ಯೋಧ ನಮನ:
ನಿವೃತ್ತ ಸೇನಾನಿಗಳಾದ ಟಿ.ಜಿ.ಮ್ಯಾಥ್ಯೂ, ಹರೀಶ್ ಚೀಮುಳ್ಳು, ರಾಮಚಂದ್ರ ಪುಚ್ಚೇರಿ ಹಾಗೂ ಹರೀಶ್ ಪಿ.ಜಿ. ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಟಿ.ಜಿ.ಮ್ಯಾಥ್ಯೂ ಮಾತನಾಡಿದರು.

NESARA|| WhatsApp ||GROUPS

   
                          

 

  
                                                     

 

Leave a Reply

error: Content is protected !!