ಧರ್ಮಸ್ಥಳದಲ್ಲಿ ಏರ್ ಪೋರ್ಟ್ ನಿರ್ಮಾಣ – ಸಚಿವ ಸೋಮಣ್ಣ

ಶೇರ್ ಮಾಡಿ

ನೇಸರ ಆ.27: ಧರ್ಮಸ್ಥಳದಲ್ಲಿ ಏರ್ ಪೋರ್ಟ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಿ ಇದಕ್ಕೆ ಬೇಕಾಗುವ 100 ಎಕರೆ ಜಾಗ ಗುರುತಿಸಲು ಮುಂದಿನ ವಾರದಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗುವುದು. 100 ಕೋಟಿ ರೂ. ವೆಚ್ಚದ ಈ ಮಿನಿ ಏರ್ ಪೋರ್ಟ್ ನಲ್ಲಿ 4 ಹೆಲಿಪ್ಯಾಡ್ ಗಳನ್ನು ನಿರ್ಮಿಸುವ ಬಗ್ಗೆ ಯೋಚಿಸಲಾಗಿದೆ ಎಂದು ವಸತಿ ಸಚಿವ ಸೋಮಣ್ಣ ಹೇಳಿದರು.

ಅವರು ಶನಿವಾರ ಗುರುವಾಯನಕೆರೆಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ತಾಲೂಕಿನ 2021-22ನೇ ಸಾಲಿನ ಬಸವ ವಸತಿ ಹಾಗೂ ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಅರ್ಹ ಫಲಾನುಭವಿಗಳಿಗೆ ನೂತನ ಗೃಹ ನಿರ್ಮಾಣ ಕಾಮಗಾರಿಯ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಯೋಜನೆಗಳು ಶಾಸಕ ಹರೀಶ್ ಪೂಂಜ ಅವರ ಕಾರ್ಯವೈಖರಿಯಿಂದ ರಾಜ್ಯವೇ ಗುರುತಿಸುವಂತಾಗಿದೆ. ಶಾಸಕರು ತಮ್ಮ ಕ್ಷೇತ್ರದ ಒಳಿತಿಗೆ ಇಲಾಖೆಗಳಿಂದ ಸಿಗುವ ಅನುದಾನವನ್ನು ಬಳಸಿ ಜನರಿಗೆ ಬೇಕಾದ ಸವಲತ್ತುಗಳನ್ನು ತಲುಪಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಸಮರ್ಪಣಾ ಭಾವದಿಂದ ನಡೆಯುತ್ತಿರುವ ಇವರ ಸೇವೆ ಅವಿಸ್ಮರಣೀಯವಾದದು ಎಂದು ಹೇಳಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ
ಪ್ರತಿಯೊಬ್ಬನಿಗೂ ಮನೆ ಕಟ್ಟುವ ಕನಸು ಇರುತ್ತದೆ. ಆ ಸಂಕಲ್ಪ ಈಡೇರುವ ಕಾಲ ಬಂದಿದೆ. ಸರಕಾರವು ರಾಜ್ಯದ ಪ್ರತಿ ತಾಲೂಕಿಗೆ ಮನೆಗಳನ್ನು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಯನ್ನು ರೂಪಿಸಿ ಅದನ್ನು ಜನರಿಗೆ ತಲುಪಿಸುತ್ತಿದೆ.
ಬೆಳ್ತಂಗಡಿ ತಾಲೂಕಿಗೆ ಇನ್ನೂ 5,000 ಮನೆಗಳ ಅಗತ್ಯವಿದ್ದು ಈ ಬಗ್ಗೆ ಸಚಿವರಲ್ಲಿ ಮನವಿ ಮಾಡಲಾಗಿದೆ. ತಾಲೂಕಿನ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ವಿಷಯದಲ್ಲಿ ಹೆಚ್ಚಿನ ಶಕ್ತಿಯನ್ನು ನೀಡುತ್ತಿರುವುದರಿಂದ ಜನತೆಗೆ ಸೌಲಭ್ಯ ಒದಗಿಸಲು ಅನುಕೂಲವಾಗಿದೆ ಎಂದರು.

ಎಂ ಎಲ್ ಸಿ ಪ್ರತಾಪಸಿಂಹ ನಾಯಕ್, ಜಿಪಂ ಸಿಇಒ ಡಾ.ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ ಉಪಾಧ್ಯಕ್ಷ ಜಯಾನಂದ, ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ಅರುಣ್ ಕುಮಾರ್, ತಹಸೀಲ್ದಾರ್ ಪೃಥ್ವಿ ಸಾನಿಕಂ, ವಸತಿ ನಿಗಮದ ಅಧಿಕಾರಿ ಎಚ್. ಆರ್. ನಾಯಕ್ ಹಾಗೂ ತಾಲೂಕಿನ ನಾನಾ ಗ್ರಾಪಂ ಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಉಜಿರೆ ಗ್ರಾಪಂ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯತ್ ಇ ಒ ಕುಸುಮಾಧರ ಬಿ. ಸ್ವಾಗತಿಸಿದರು.

ಹೆಚ್ಚುವರಿ 10 ಕೋಟಿ
ತಾಲೂಕಿನ ಮೂಲಭೂತ ಸೌಕರ್ಯ ವೃದ್ಧಿಗೆ 10 ಕೋಟಿ ರೂ. ಹೆಚ್ಚಿನ ಅನುದಾನ ನೀಡಲಾಗುವುದು. ತಾಲೂಕಿನ 48 ಪಂಚಾಯಿತಿಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿ ಮನೆ ಬೇಕಾಗಿರುವ ಫಲಾನುಭವಿಗಳನ್ನು ತಕ್ಷಣ ಗುರುತಿಸಿ ವರದಿ ನೀಡಬೇಕು. ಕೂಡಲೆ ಮನೆಗಳನ್ನು ಒದಗಿಸುವ ಕೆಲಸ ಮಾಡಲಾಗುವುದು. ಬಸವ ವಸತಿ ಯೋಜನೆಯೆಲ್ಲಿ ರೂ 1500 ಕೋಟಿ ಅನುದಾನ ಇದೆ.ಜನರಿಗೆ ಯೋಜನೆಗಳು ಸಮರ್ಪಕವಾಗಿ ತಲುಪಲು ದಕ ಜಿಲ್ಲೆಯಲ್ಲಿ ಅಧಿಕಾರಿ ವರ್ಗ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು.

Leave a Reply

error: Content is protected !!