ನೇಸರ ಆ.28: ಆಯುರ್ವೇದ ಎಂಬುದು ಅತ್ಯಂತ ಮಹತ್ವದ ಪದ್ಧತಿಯಾಗಿದೆ. ನಮ್ಮ ದೇಶದ ಪ್ರಧಾನಿ ಆಯುರ್ವೇದ ಹಾಗೂ ಯೋಗದ ಕುರಿತು ನೀಡುತ್ತಿರುವ ಸಂದೇಶವನ್ನು ಇಡೀ ಜಗತ್ತು ಇಂದು ಪಾಲಿಸುತ್ತಿದೆ. ಜನ್ಮಭೂಮಿ, ಪುಣ್ಯ ಭೂಮಿ, ಕರ್ಮ ಭೂಮಿ, ತ್ಯಾಗ ಭೂಮಿ ಯಾಗಿರುವ ನಮ್ಮ ದೇಶ ವಿಶೇಷ ಸ್ಥಾನವನ್ನು ಹೊಂದಿದೆ. ಇಂದಿನ ಕಾಲದಲ್ಲಿ ವಿಶ್ವಾಸದಿಂದ ಆಯುರ್ವೇದ ಚಿಕಿತ್ಸಾ ಪದ್ಧತಿ ಮುಂದುವರಿಸಿದರೆ ರೋಗ ಶಮನ ಸಾಧ್ಯ ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಹೇಳಿದರು.
ಅವರು ಧರ್ಮಸ್ಥಳದ ವಸಂತ ಮಹಲ್ ನಲ್ಲಿ ಅ.28 ರಂದು ಆಯುರ್ವೇದ “ಜ್ಞಾನಯಾನ” ಅಭಿಯಾನದಡಿ ಡಾ.ಗಿರಿಧರ ಕಜೆ ಅವರ 6ನೇ ಕೃತಿ “ಪ್ರಕೃತಿ” ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಪೌಷ್ಟಿಕ ಆಹಾರಗಳ ಬೆಳೆಗಳನ್ನು ಬೆಳೆಯುವವರು ಸಂಖ್ಯೆ ಕಡಿಮೆಯಾಗಿದೆ. ಆದರೆ ಇದನ್ನು ಉಪಯೋಗಿಸುವವರು ಸಂಖ್ಯೆ ಅಧಿಕವಾಗಿದೆ. ಇಂದಿನ ಆಹಾರ ಪದ್ಧತಿ ಯಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಹಾಗಾಗಿ ನಾವುಗಳು ಹಳೆಯ ಬೆಳೆಗಳ ಪದ್ಧತಿ ಮುಂದುವರಿಸಿ ಪೂರ್ವಜರು ಅನುಸರಿಸಿದ ಆರೋಗ್ಯ ವ್ಯವಸ್ಥೆ ಮುಂದುವರಿಯಬೇಕು ಎಂದರು.
ಸೆಲ್ಕೋ ಸೋಲಾರ್ ನ ಸಿಇಒ ಮೋಹನ್ ಭಾಸ್ಕರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ರವೀಂದ್ರ ಭಟ್ ಐನಕೈ, ಖಾಸಗಿ ವಾಹಿನಿ ನಿರೂಪಕ ರಂಗನಾಥ ಭಾರದ್ವಾಜ್ ಉಪಸ್ಥಿತರಿದ್ದರು.
ಡಾ.ಪ್ರಖ್ಯಾತ್ ಶೆಟ್ಟಿ ಹಾಗೂ ತೋಳ್ಪಡಿತ್ತಾಯ ಸಹೋದರರಿಂದ ಯಕ್ಷಗಾನ ಶೈಲಿಯ ಪ್ರಾರ್ಥನೆ ನಡೆಯಿತು. ಡಾ.ಗೋವಿಂದ ಪ್ರಸಾದ್ ಕಜೆ ಸ್ವಾಗತಿಸಿದರು. ಸೆಲ್ಕೋ ಡಿಜಿಎಂ ಗುರುಪ್ರಸಾದ್ ಶೆಟ್ಟಿ ವಂದಿಸಿದರು. ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪಂಚೇಂದ್ರಿಯಗಳ ಹತೋಟಿಗೆ ಉತ್ತಮ. ಆಯುರ್ವೇದದ ಸಂಶೋಧನೆ ಮೂಲಕ ಪುರಾವೆಗಳನ್ನು ಸಿದ್ಧಪಡಿಸಿದರೆ ಹೆಚ್ಚಿನ ವಿಶ್ವಾಸವಿರುತ್ತದೆ. ಹಿತ ಮಿತವಾದ ಆಹಾರ ಬಳಸುವುದರಿಂದ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಲು ಸಾಧ್ಯವಿದೆ. ಇತರರ ಬಗ್ಗೆ ಯೋಚಿಸದೆ ನಾವೇನು ಎಂದು ಅರಿತುಕೊಳ್ಳುವ ಜೀವನ ಸೂತ್ರವನ್ನು ಅಳವಡಿಸಿಕೊಂಡು ಪ್ರಕೃತಿಯನ್ನು ರಕ್ಷಿಸಿ ಅದರ ಸದುಪಯೋಗ ಪಡೆದುಕೊಂಡು ಜೀವಿಸಬೇಕು.
ಗಿರಿಧರ ಕಜೆ ಅವರ ಪುಸ್ತಕಗಳಲ್ಲಿ ಜೀವನ ಹಾಗೂ ಆರೋಗ್ಯ ಪದ್ಧತಿಯ ಕುರಿತು ಉತ್ತಮ ಸಲಹೆಗಳಿವೆ ಎಂದು “ಪ್ರಕೃತಿ” ಕೃತಿಯನ್ನು ಲೋಕಾರ್ಪಣೆಗೊಳಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.