ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆ ಅಭಿವೃದ್ಧಿ ➤ ದೆಹಲಿ ಮೂಲದ ಕಂಪೆನಿಗೆ ಟೆಂಡರ್

ಶೇರ್ ಮಾಡಿ

ನೇಸರ ಸೆ.04: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಯ ಅಂಗವಾಗಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ 33.1ಕಿಮೀ. ರಸ್ತೆ ಮೇಲ್ದರ್ಜೆಗೇರಲಿದೆ.
ಇದು 718 ಕೋಟಿ ರೂ. ಯೋಜನೆಯ ಕಾಮಗಾರಿಯಾಗಿದ್ದು, ಇದಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಸುಮಾರು 10 ಕಂಪೆನಿಗಳು ಟೆಂಡರ್ ಸಲ್ಲಿಸಿದ್ದವು. ಇದರಲ್ಲಿ ದೆಹಲಿ ಮೂಲದ ಡಿ.ಪಿ‌.ಜೈನ್ ಅಂಡ್ ಕೋ ಇನ್ಫ್ರಾಸ್ಟ್ರಕ್ಚರ್ ಎಂಬ ಕಂಪೆನಿ ಕಡಿಮೆ ಮೊತ್ತದ ಬಿಡ್ ಸಲ್ಲಿಸಿದ್ದು ಆ ಕಂಪೆನಿಗೆ ಕಾಮಗಾರಿ ದೊರೆತಿದೆ ಎಂದು ಹೇಳಲಾಗಿದೆ.
ಬಹು ನಿರೀಕ್ಷೆಯ ಈ ಕಾಮಗಾರಿ ನವೆಂಬರ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ.
ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಹರೀಶ್ ಪೂಂಜ ರವರ ಮುತುವರ್ಜಿಯಿಂದ ಈ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿತ್ತು.

ಪ್ರಥಮ ಹಂತದಲ್ಲಿ 35 ಕಿಮೀ ರಸ್ತೆ ವ್ಯಾಪ್ತಿಯನ್ನು ಗುರುತಿಸಲಾಗಿದ್ದು ಹಲವು ಸಮೀಕ್ಷೆಗಳು ನಡೆದಿದ್ದವು. ಬಳಿಕ ತಿರುವುಗಳನ್ನು ಹೆಚ್ಚು ನೇರಗೊಳಿಸುವ ನಿಟ್ಟಿನಲ್ಲಿ ಮರು ಸಮೀಕ್ಷೆಗೆ ಆದೇಶ ನೀಡಲಾಗಿತ್ತು ಅದರಂತೆ ರಸ್ತೆ ವ್ಯಾಪ್ತಿ ಸುಮಾರು 1.9ಕಿಮೀ.ಯಷ್ಟು ಕಡಿಮೆಯಾಗಲಿದೆ. ಇದಕ್ಕಾಗಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಸೆಂಟ್ರಲ್ ಮಾರ್ಕಿಂಗ್ ಸಮೀಕ್ಷೆ ಪೂರ್ಣಗೊಂಡಿದೆ. ಕಂದಾಯ ಇಲಾಖೆಯಿಂದ ತೆರವುಗೊಳ್ಳಬೇಕಾದ ಕಟ್ಟಡ, ಖಾಸಗಿ ಸ್ಥಳಗಳ ಸಮೀಕ್ಷೆ ಪ್ರಗತಿಯಲ್ಲಿದೆ.
ನಗರ ಪ್ರದೇಶದಲ್ಲಿ ರಸ್ತೆ ವ್ಯಾಪ್ತಿ 30ಮೀ. ಹಾಗೂ ಗ್ರಾಮೀಣ ಭಾಗದಲ್ಲಿ 20ಮೀ. ಇರಲಿದೆ. ಇದೀಗ ದುಸ್ತರವಾಗಿರುವ ಗುರುವಾಯನಕೆರೆ ಉಜಿರೆ ಸಂಚಾರ ರಸ್ತೆ ಅಭಿವೃದ್ಧಿಯಿಂದ ಸುಗಮಗೊಳ್ಳಲಿದೆ.
ಹೆದ್ದಾರಿ ಅಗಲೀಕರಣದ ಸಮಯ ಸುಮಾರು 2,400 ರಷ್ಟು ಮರಗಳು ತೆರವುಗೊಳ್ಳಬೇಕಾಗಿರುವ ಕುರಿತು ಹಿಂದಿನ ಸಮೀಕ್ಷೆಯಲ್ಲಿ ಗುರುತಿಸಿ ಮರಗಳಿಗೆ ಮಾರ್ಕ್ ಹಾಕಲಾಗಿದೆ. ರಸ್ತೆ ವ್ಯಾಪ್ತಿಯಲ್ಲಿ ಬದಲಾವಣೆ ಇರುವ ಕಾರಣ ಕೆಲವು ಕಡೆ ತೆರವುಗೊಳ್ಳಬೇಕಾದ ಮರಗಳ ಮರು ಸಮೀಕ್ಷೆ ಮತ್ತೆ ನಡೆಯಲಿದೆ.
ಹೆದ್ದಾರಿ ಅಭಿವೃದ್ಧಿಯಿಂದ ಗುರುವಾಯನಕೆರೆ ಬೆಳ್ತಂಗಡಿ, ಉಜಿರೆ ಮೊದಲಾದ ಪ್ರಮುಖ ಪೇಟೆ ಹಾಗೂ ನಿಡಿಗಲ್ ಸೋಮಂತಡ್ಕ, ಕಕ್ಕಿಂಜೆ ಮೊದಲಾದ ಗ್ರಾಮೀಣ ಪೇಟೆಗಳ ಚಿತ್ರಣ ಬದಲಾಗಲಿದೆ.
ಟೆಂಡರ್ ನ ಪ್ರಕ್ರಿಯೆಗಳು ದೆಹಲಿಯಲ್ಲಿ ನಡೆಯುತ್ತಿದ್ದು, ಅಂತಿಮ ಟೆಂಡರ್ ಕುರಿತು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

error: Content is protected !!