ನೇಸರ ಸೆ.17: ನೂಜಿಬಾಳ್ತಿಲ, ರೆಂಜಿಲಾಡಿ ಭಾಗದಲ್ಲಿ ಕಳೆದ ಕೆಲ ವರ್ಷಗಳಿಂದ ನಿರಂತರ ಕಾಡಾನೆಗಳ ಹಾವಳಿಯಿಂದ ಸಾವಿರಾರು ಕೃಷಿ ಗಿಡಗಳು ನಾಶವಾಗಿ ಕೋಟ್ಯಾಂತರ ರೂ. ನಷ್ಟವನ್ನು ಕೃಷಿಕರು ಅನುಭವಿಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಕಾಡಾನೆ ಹಾವಳಿ ತಡೆಗೆ ವ್ಯವಸ್ಥಿತ ಕಂದಕ ನಿರ್ಮಿಸುವಂತೆ ಗ್ರಾಮಸ್ಥರು ಗ್ರಾಮ ವಾಸ್ತವ್ಯದಲ್ಲಿ ಆಗ್ರಹಿಸಿದರು.
ನೂಜಿಬಾಳ್ತಿಲ ಸ.ಉ.ಹಿ.ಪ್ರಾ.ಶಾಲೆಯಲ್ಲಿ ನಡೆದ ನೂಜಿಬಾಳ್ತಿಲ ಗ್ರಾಮವಾಸ್ತವ್ಯವನ್ನು ಕಡಬ ತಹಶೀಲ್ದಾರ್ ಅನಂತಶಂಕರ ಬಿ. ಉದ್ಘಾಟಿಸಿದರು. ಕಳೆದ ಒಂದು ವರ್ಷಗಳಿಂದ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಪೂರಕ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರೂ ಈಡೇರಿಲ್ಲ. ಕೃಷಿ ಹಾನಿಗೆ ದೊರೆಯುವ ಪರಿಹಾರ ಎಲ್ಲಷ್ಟು ಸಾಲದು ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ ಮಾತನಾಡಿ, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪೂರಕ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ಸಿಬ್ಬಂದಿ, ವೈದ್ಯರು ಇರುವಂತೆ ನೇಮಕ ಮಾಡುವಂತೆ ಆಗ್ರಹ ವ್ಯಕ್ತವಾಯಿತು. ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ನಿರ್ಣಯ ಕೈಗೊಳ್ಳಲಾಯಿತು. ಸುಬ್ರಹ್ಮಣ್ಯ-ಮರ್ದಾಳ-ಧರ್ಮಸ್ಥಳ ಹೆದ್ದಾರಿಯ ಪೆರಿಯಶಾಂತಿ ಬಳಿಯ ಅಪಾಯಕಾರಿ ಮರಗಳನ್ನು ತೆರವಿಗೆ ಆಗ್ರಹಿಸಲಾಯಿತು. ಶಾಲೆಗಳಿಗೆ ಉಚಿತ ವಿದ್ಯುತ್ ಪೊರೈಕೆಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಪುತ್ತಿಗೆ ಶಾಲೆಗೆ ಶಿಕ್ಷಕರ ನಿಯೋಜಿಸುವಂತೆ ಎಲ್ಲಾ ಶಾಲೆಗಳ ಶಿಕ್ಷಕರ ಕೊರತೆ ನೀಗಿಸುವಂತೆ ಆಗ್ರಹ ಕೇಳಿಬಂತು.
ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಇಮಾನ್ಯುವೆಲ್ ಪಿ.ಜೆ., ಸದಸ್ಯರಾದ ಶ್ರೀಧರ ಗೌಡ ಗೋಳ್ತಿಮಾರ್, ಚಂದ್ರಶೇಖರ ಗೌಡ ಹಳೆನೂಜಿ, ಉಮೇಶ್ ಎಸ್.ಜೆ., ಜೋಸೆಫ್ ಪಿ.ಜೆ., ಮೀನಾಕ್ಷಿ, ವಿನಯಕುಮಾರಿ ಬಳಕ್ಕ, ವಿಜಯಲಕ್ಷ್ಮಿ, ಚಂದ್ರಾವತಿ, ಗ್ರಾ.ಪಂ. ಸದಸ್ಯರು, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪ್ರಮೋದ್, ಕಡಬ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸುಚಿತ್ರಾ, ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಕಡಬ ಎಸ್‌ಐ ಆಂಜನೇಯ ರೆಡ್ಡಿ, ಪಿಡಿಒ ಗುರುವ ಎಸ್., ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದು, ಇಲಾಖಾ ಮಾಹಿತಿ ನೀಡಿದರು. ಉಪತಹಶೀಲ್ದಾರ್ ಗೋಪಾಲ ಕಲ್ಲುಗುಡ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.