ಕೀಬೋರ್ಡ್ ಮತ್ತು ಸುಗಮಸಂಗೀತ ತರಬೇತಿ ತರಗತಿ ಉದ್ಘಾಟನೆ : ನೆಲ್ಯಾಡಿ

ಶೇರ್ ಮಾಡಿ

ನೇಸರ ಡಿ6: ಐಐಸಿಟಿ ಕಂಪ್ಯೂಟರ್ ಶಿಕ್ಷಣ ಕೇಂದ್ರ ನೆಲ್ಯಾಡಿ ಇದರ ಆಶ್ರಯದಲ್ಲಿ ದಿನಾಂಕ 5-12-2021 ಆದಿತ್ಯವಾರ ಕೀಬೋರ್ಡ್ ಮತ್ತು ಸುಗಮಸಂಗೀತ ತರಬೇತಿ ತರಗತಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಉಪನ್ಯಾಸಕ ಖ್ಯಾತ ಕೀಬೋರ್ಡ್ ವಾದಕರು ಹಾಗೂ ಇಂಚರ ಮ್ಯೂಸಿಕಲ್ಸ್ ರಾಮಕುಂಜ ಸಂಸ್ಥೆಯ ಸಂಚಾಲಕರಾದ ಸುಬ್ರಮಣ್ಯ ಕಾರಂತ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಕೇವಲ ಪಾಠಕ್ಕೆ ಸಂಬಂಧಿಸಿದ ವಿಷಯವನ್ನು ಮಾತ್ರ ಅಧ್ಯಯನ ಮಾಡಿದರೆ ಸಾಲದು ಕಲೆಯ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಮಾನಸಿಕ ನೆಮ್ಮದಿಯ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು ಎಂದು ನುಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂತ ಜಾರ್ಜ್ ಪ್ರೌಢಶಾಲೆಯ ನಿವೃತ್ತ ಮುಖ್ಯಗುರುಗಳಾದ ವೆಂಕಟ್ರಮಣ ಭಟ್. ಆರ್. ಮಾತನಾಡುತ್ತಾ ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಕೀಬೋರ್ಡ್ ಮತ್ತು ಸುಗಮ ಸಂಗೀತ ತರಗತಿಗಳನ್ನು ನಡೆಸುವುದರಿಂದ ಹಳ್ಳಿಯ ಪ್ರತಿಭೆಗಳನ್ನು ಹೊರತರುವುದಕ್ಕೆ ಅವಕಾಶ ನೀಡಿದಂತಾಗುವುದು ಮತ್ತು ಈ ತರಗತಿಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ನುಡಿದರು.

ಆರೋಗ್ಯ ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಚಾರ್ಯರಾದ ಮೀನಾಕ್ಷಿ ಅವರು ಮಾತನಾಡುತ್ತಾ ಯಾವುದೇ ಒಂದು ಗಾಯನಕ್ಕೆ ಹಿನ್ನೆಲೆ ಸಂಗೀತ ಬಹಳ ಅವಶ್ಯಕ, ಭರತನಾಟ್ಯ ದಂತಹ ನೃತ್ಯ ಕಾರ್ಯಕ್ರಮಗಳಲ್ಲಿ ಕೀಬೋರ್ಡ್ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಕೀಬೋರ್ಡ್ ನುಡಿಸುವುದನ್ನು ಕಲಿತುಕೊಂಡರೆ ಮುಂದಕ್ಕೆ ಅದರಿಂದ ಅವರಿಗೆ ತುಂಬಾ ಪ್ರಯೋಜನಗಳು ಲಭಿಸುವವು ಎಂದು ನುಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ವ್ಯಕ್ತಿ ವಿಮಲ್ ಕುಮಾರ್ ರವರು ಮಾತನಾಡುತ್ತ ಸಂಗೀತ ನಮ್ಮ ಮನಸ್ಸಿಗೆ ನೆಮ್ಮದಿಯನ್ನು ಆರೋಗ್ಯವನ್ನು ನೀಡುವಂತಹ ಒಂದು ಮಾಧ್ಯಮ ವಿದ್ಯಾರ್ಥಿಗಳು ತಮ್ಮ ಪಾಠದ ಜೊತೆಗೆ ಸಂಗೀತವನ್ನು ಅಭ್ಯಾಸ ಮಾಡಿಕೊಂಡರೆ ವ್ಯಕ್ತಿತ್ವ ವಿಕಸನವಾಗುವುದರಲ್ಲಿ ಸಂದೇಹವಿಲ್ಲ ಎಂದು ನುಡಿದರು. ನೆಲ್ಯಾಡಿಯ ಪ್ರಸಿದ್ಧ ವೈದ್ಯರಾದ ಡಾ ಅನೀಶ್ ಶುಭ ಹಾರೈಸಿದರು. ಖ್ಯಾತ ಕೀಬೋರ್ಡ್ ವಾದಕರಾದ ಪ್ರಕಾಶ್ ಕುಂಬಳೆ ವಿದ್ಯಾರ್ಥಿಗಳಿಗೆ ಕೀಬೋರ್ಡ್ ತರಬೇತಿಯನ್ನು ನೀಡಲಿದ್ದಾರೆ. ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ವಿಶ್ವನಾಥ ಶೆಟ್ಟಿ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಗತಿಗಳನ್ನು ನಡೆಸಲಿದ್ದಾರೆ ಮತ್ತು ವಿದ್ಯಾರ್ಥಿಗಳ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ತರಗತಿಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಲಾಯಿತು.ಕುಮಾರಿ ಸಾಯಿದೃತಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಕಲಾ ಪೋಷಕರು ಹಾಗೂ ನೆಲ್ಲ್ಯಾಡಿಯ ಪ್ರಸಿದ್ಧ ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ಪ್ರಸಿದ್ಧ ಗಾಯಕರಾದ ಮನೋಜ್ ಶೆಟ್ಟಿ ಬೆಂಗಳೂರು, ಬೆಳ್ತಂಗಡಿ ಆರೋಗ್ಯ ಕೇಂದ್ರದ ಬ್ಲಾಕ್ ಅಕೌಂಟ್ಸ್ ಮ್ಯಾನೇಜರ್ ಸೌಮ್ಯ.ರೈ, ಸಂಧ್ಯಾಸುಧೀರ್,ಅಧ್ಯಾಪಕರು, ಹೆತ್ತವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

error: Content is protected !!