ನೇಸರ ಸೆ.18: ಶಿಶಿಲದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಶಿಶಿಲ ಕಂಡೊಡು ಕೆಸರ್ ಡೊಂಜಿ ದಿನ ಕಾರ್ಯಕ್ರಮವು ಭಾನುವಾರ ಶಿಶಿಲದ ಜಗದೀಶ ಎಳ್ಳು ಮಜಲುರವರ ಗದ್ದೆಯಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ ಶಿಶಿಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದೇವಳದ ಆಡಳಿತ ಮೊಕ್ತೇಸರ ಶ್ರೀನಿವಾಸ ಮೂಡೆತ್ತಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ವೇಷಭೂಷಣಗಳ ಅದ್ದೂರಿ ಮೆರವಣಿಗೆಯೊಂದಿಗೆ ಗದ್ದೆಗೆ ಆಗಮಿಸ ಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ತಾಲೂಕು ಶಾಸಕ ಹರೀಶ್ ಪೂಂಜ ಜನಸಾಮಾನ್ಯರೊಂದಿಗೆ ಗದ್ದೆಯಲ್ಲಿ ಕುಣಿದು ಕಾರ್ಯಕ್ರಮಕ್ಕೆ ಹುರುಪು ನೀಡಿದರು. ಅಲ್ಲದೆ ನೆರೆದಿದ್ದ ಯುವ ಮನಸುಗಳನ್ನು ಹುರಿದುಂಬಿಸಲು ತಾವೇ ಸ್ವತಃ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಸ್ಪರ್ಧಿಗಳಿಗೆ ಪ್ರೇರಣೆ ನೀಡಿದರು.
ಖ್ಯಾತ ಸಮಾಜ ಸೇವಕ ಉಡುಪಿಯ ರವಿ ಕಟಪಾಡಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಈ ಸಂದರ್ಭ ಕೆಸರಡೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷ ಕರುಣಾಕರ ಶಿಶಿಲ, ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ್ ಗೌಡ ಅಮ್ಮುಡಂಗೆ, ಕಾರ್ಯಕ್ರಮ ಆಯೋಜನ ಸಮಿತಿಯ ಕಾರ್ಯದರ್ಶಿ ಸುಧೀನ್ ಶಿಶಿಲ, ಚರಣ್, ಪ್ರಧಾನ ಸಂಚಾಲಕ ಗಂಗಾಧರ ಶಿಶಿಲ, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಆನಂದ ಕಂಡೆಚ್ಚಾರು ಉಪಸ್ಥಿತರಿದ್ದರು.
ಸಾವರ್ಕರ್ ಭಾವಚಿತ್ರ, ಕಂಬಳದ ಕೋಣಗಳು, ಶ್ರೀ ದೇವಿ, ಸ್ಥಬ್ದ ಚಿತ್ರ, ಮುಂತಾದ ವೇಷಧಾರಿಗಳು ಮೆರವಣಿಗೆಗೆ ಕಳೆ ನೀಡಿತು.
ಗದ್ದೆಯಲ್ಲಿ ಬಾಲಕ, ಬಾಲಕಿ, ಮಹಿಳೆ, ಪುರುಷ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಲಿಂಬೆ ಚಮಚದ ಓಟ, ಕಬಡ್ಡಿ, ಹಗ್ಗ ಜಗ್ಗಾಟ, ಹಿಮ್ಮುಖ ಓಟ, ಕೆಸರಿನಲ್ಲಿ ಓಟ ಸ್ಪರ್ಧೆ ನಡೆಯಿತು.