ನೆಲ್ಯಾಡಿ: ಕಡಬ ತಾಲೂಕು ಕೌಕ್ರಾಡಿ ಗ್ರಾಮ ಪಂಚಾಯತ್ ಗೆ ಒಳಪಟ್ಟ ನೆಲ್ಯಾಡಿ ಪೇಟೆಯಿಂದ ಕುಂಡಡ್ಕ ಕ್ಕೆ ಹೋಗುವ ಪಂಚಾಯತ್ ರಸ್ತೆಯನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ಹಾಗೂ ತಡೆಗೋಡೆ ನಿರ್ಮಿಸಿದ್ದಾರೆ, ಇದನ್ನು ತೆರವುಗೊಳಿಸುವಂತೆ ಕೆಲ ಗ್ರಾಮಸ್ಥರು ಕೌಕ್ರಾಡಿ ಗ್ರಾ.ಪಂ. ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಲ್ಲಿ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಕೌಕ್ರಾಡಿ ಗ್ರಾಮ ಪಂಚಾಯಿತಿಗೊಳ್ಳಪಟ್ಟ ನೆಲ್ಯಾಡಿ ಪೇಟೆಯಿಂದ ಕುಂಡಡ್ಕ ಪ್ರದೇಶಕ್ಕೆ ಸಂಪರ್ಕಿಸುವ ಪಂಚಾಯತ್ ರಸ್ತೆಯನ್ನು ಸಾವಿರಾರು ಸಾರ್ವಜನಿಕರು, ವಿದ್ಯಾರ್ಥಿಗಳು, ಕೂಲಿಯಾಳುಗಳು ಅವರವರ ದಿನನಿತ್ಯದ ವ್ಯವಹಾರಕ್ಕಾಗಿ ಉಪಯೋಗಿಸುತ್ತಾ ಬರುತ್ತಿರುತ್ತಾರೆ. ಸದ್ರಿ ರಸ್ತೆಯು ಮೊದಲೇ ಕಿರಿದಾಗಿದ್ದು ಅತಿ ಕಷ್ಟದಿಂದ ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಹೋಗುವಂಥ ಪರಿಸ್ಥಿತಿ ಇದ್ದು. ವಾಹನಗಳು ಬರುತ್ತಿರುವಾಗ ಸಾರ್ವಜನಿಕರು ನಡೆದು ಹೋಗಲು ಕಷ್ಟಕರವಾಗುತ್ತದೆ.
ಆದರೆ ಇದೀಗ ಸದ್ರಿ ಕಿರಿದಾದ ರಸ್ತೆಯ ನೆಲ್ಯಾಡಿ ಪೇಟೆಯ ಹತ್ತಿರ ಕೆಲವರು ರಸ್ತೆಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ಮತ್ತು ತಡೆಗೋಡೆಗಳನ್ನು ನಿರ್ಮಿಸಿರುತ್ತಾರೆ. ಸದ್ರಿ ಕಾಮಗಾರಿಯಿಂದ ಮೊದಲೇ ಇಕ್ಕಟ್ಟಾದ ರಸ್ತೆ ಇನ್ನೂ ಕಿರಿದಾಗಿರುತ್ತದೆ. ಇದರಿಂದಾಗಿ ಸದರಿ ಪರಿಸರದ ಜನರಿಗೆ ತೊಂದರೆಯಾಗುತ್ತದೆ.
ಆದ್ದರಿಂದ ತಾವುಗಳು ಈ ಬಗ್ಗೆ ಪರಿಶೀಲಿಸಿ ಸದ್ರಿ ರಸ್ತೆಯ ಒತ್ತುವರಿ ಹಾಗೂ ಅಕ್ರಮ ಕಟ್ಟಡ ಮತ್ತು ತಡೆಗೋಡೆಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕಾಗಿ ವಿನಂತಿಸಲಾಗಿದೆ.
ಯಥಾಪ್ರತಿಯನ್ನು ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಜಿಲ್ಲೆ, ತಾಲೂಕು ಪಂಚಾಯತ್ ಕಡಬ ತಾಲೂಕು, ಅಭಿಯಂತರರು ತಾಲೂಕು ಪಂಚಾಯತ್ ಕಡಬ ತಾಲೂಕು, ಅಭಿಯಂತರರು, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಜಿಲ್ಲೆ ಇವರಿಗೆ ಮನವಿ ಸಲ್ಲಿಸಿದ್ದಾರೆ.