ಕಡಬ: ಜಿಲ್ಲಾಧಿಕಾರಿಗಳು ಗಡುವು ನೀಡಿ ಆರು ತಿಂಗಳು ಕಳೆದರೂ ಪ್ಲಾಟಿಂಗ್ ಕಾರ್ಯ ನಡೆದಿಲ್ಲ ಗ್ರಾಮಸ್ಥರ ಆಕ್ರೋಶ

ಶೇರ್ ಮಾಡಿ

ಕಡಬ ತಾಲೂಕು ಕಂದಾಯ ಇಲಾಖೆ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಡಬ ತಾಲೂಕು ತಹಶೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದಲ್ಲಿ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಮಜಲು ಸರಕಾರಿ ಶಾಲೆಯಲ್ಲಿ ಕಡಬ ತಾಲೂಕು ಮಟ್ಟದ ಗ್ರಾಮ ವಾಸ್ತವ್ಯ

ಕಡಬ: ಕಡಬ ತಾಲೂಕಿನ ಸರ್ವೆ ನಂಬರ್ 40, 123, 124ರ ಪ್ಲಾಟಿಂಗ್ ತಡವಾಗುತ್ತಿದೆ ಇದರಿಂದ ಜನಸಾಮಾನ್ಯರಿಗೆ ಜಾಗ ಖರೀದಿ ಹಾಗೂ ಜಾಗದಲ್ಲಿ ಸ್ವಂತ ನಿವೇಶನವನ್ನು ಪಡೆದುಕೊಳ್ಳಲು ಕಷ್ಟವಾಗುತ್ತಿದೆ. ಈ ಸಮಸ್ಯೆ ಯಾವಾಗ ಪರಿಹಾರಾದೀತು ಎಂಬುದನ್ನು ಸಮಯ ಆಧಾರಿಸಿ ಹೇಳಿ ಎಂದು ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಮಣ ಆರ್ ತಹಶೀಲ್ದಾರ್ ಟಿ.ರಮೇಶ್ ಬಾಬು ಅವರನ್ನು ಪ್ರಶ್ನಿಸಿದರು.

ಕಳೆದ 7 ತಿಂಗಳ ಹಿಂದೆ ಕಡಬದಲ್ಲಿ ಜಿಲ್ಲಾಧಿಕಾರಿಗಳು ಸಭೆ ಸೇರಿದಾಗ ಇದೇ ಸರ್ವ ನಂಬರ್ ಬಗ್ಗೆ ಫಲಾನುಭವಿಗಳು ಪ್ರಸ್ತಾಪಿಸಿದಾಗ ಮೇ 30ರ ಒಳಗೆ ಪ್ಲಾಟಿಂಗ್ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಫಲಾನುಭವಿಗಳ ಬಳಿ ಅರ್ಜಿಯನ್ನು ಪಡೆದುಕೊಂಡು ಸಂಬಂಧಿಸಿದ ಅಧಿಕಾರಿಗಳೇ ಅದಕ್ಕೆ ಬೇಕಾದಂತಹ ದಾಖಲೆಗಳನ್ನು ಸಂಗ್ರಹಿಸಿ ಕೊಡಬೇಕು ಎಂದು ಹೇಳಿದ್ದರು. ಆದರೆ ಜಿಲ್ಲಾಧಿಕಾರಿಗಳು ಗಡುವು ನೀಡಿ ಆರು ತಿಂಗಳು ಕಳೆದರೂ ಇದುವರೆಗೆ ಅಲ್ಲಿ ಪ್ಲಾಟಿಂಗ್ ಕಾರ್ಯ ನಡೆದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ಗ್ರಾಮಸ್ಥರಲ್ಲಿ ಮತ್ತದೇ ಪ್ರತಿಧ್ವನಿಸಿದಾಗ ಅಧಿಕಾರಿಗಳು ಪೂರಕ ದಾಖಲೆಗಳನ್ನು ಸರಿಯಾದ ಸಂದರ್ಭದಲ್ಲಿ ನೀಡಿದರೆ ಪ್ಲಾಟಿಂಗ್ ಕಾರ್ಯ ಬೇಗ ಆಗುತ್ತದೆ ಎಂದು ಹೇಳಿದರು. ಮತ್ತೆ ಆಕ್ರೋಶಗೊಂಡ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಮೌಖಿಕ ಆದೇಶ ನೀಡಿದನ್ನು ಉಲ್ಲೇಖಿಸಿ ಅಧಿಕಾರಿಗಳೇ ದಾಖಲೆಯನ್ನು ಸಂಗ್ರಹಿಸಿ ಎಂದು ತಿರು ಉತ್ತರ ನೀಡಿದರು.
123 ಸರ್ವೆ ನಂಬರಿನ ಅರ್ಜಿಯನ್ನು ಅಸಿಸ್ಟೆಂಟ್ ಕಮಿಷನರ್ ಅವರ ಕಚೇರಿಗೆ ಕಡಬ ತಾಲೂಕಿನಿಂದ ಕಳುಹಿಸಲಾಗಿದೆ ಆದರೆ ಕಳೆದ ಒಂದೂವರೆ ತಿಂಗಳಿನಿಂದ ಆ ಅರ್ಜಿಯು ಅಲ್ಲೇ ಇದೆ ಕೂಡಲೇ ಅದರ ಬಗ್ಗೆ ವಿಚಾರಿಸಿ ಎಂದು ಜನಪ್ರತಿನಿಧಿಗಳಾದ ಭಾಸ್ಕರ ಗೌಡ ಇಚಿಲಂಪ್ಪಾಡಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರರು ಇ ಬಗ್ಗೆ ವಿಚಾರಿಸಿ ತಿಳಿಸುತ್ತೇವೆ ಎಂದರು.
ಕಡಬ ತಾಲೂಕು ಕಂದಾಯ ಇಲಾಖೆ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಡಬ ತಾಲೂಕು ತಹಶೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದಲ್ಲಿ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಮಜಲು ಸರಕಾರಿ ಶಾಲೆಯಲ್ಲಿ ಕಡಬ ತಾಲೂಕು ಮಟ್ಟದ ಗ್ರಾಮ ವಾಸ್ತವ್ಯ ಅಕ್ಟೋಬರ್ 15ರಂದು ತಹಶೀಲ್ದಾರ್ ಟಿ.ರಮೇಶ್ ಬಾಬು ಅಧ್ಯಕ್ಷತೆಯಲ್ಲಿ ನಡೆಯಿತು.
ಸಾರ್ವಜನಿಕರಿಂದ ಲಿಖಿತ ರೂಪದಲ್ಲಿ ಒಟ್ಟು 30 ಅರ್ಜಿಗಳನ್ನು ತಹಶೀಲ್ದಾರರಿಗೆ ನೀಡಲಾಯಿತು. ಬಹು ವರ್ಷದ ಬೇಡಿಕೆಯಾದ ದಿಡುಪೆಯಿಂದ ಪೈಚಾರು ರಸ್ತೆ ವ್ಯಾಪ್ತಿಯ ನೆಲ್ಯಾಡಿಯಿಂದ ಕೊಕ್ಕಡವನ್ನು ಸಂಪರ್ಕಿಸುವ ಪುತ್ಯೆ ರಸ್ತೆಯ 800 ಮೀಟರ್ ವ್ಯಾಪ್ತಿ ತೀರ ಕಳಪೆಯಾಗಿದ್ದು ಪಾದಚಾರಿಗಳಿಗೂ ಸಂಚರಿಸಲು ಕಷ್ಟವಾಗಿದೆ. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರೆ ಹಾಗೂ ಮಾಧ್ಯಮಗಳಲ್ಲಿ ಪ್ರಸ್ತಾಪಗೊಂಡಿದೆ, ಸಂಬಂಧಪಟ್ಟ ಶಾಸಕರ ಗಮನಕ್ಕೂ ತರಲಾಗಿದೆ. ಆದರೆ ಶಾಸಕರು ಯಾವುದೇ ಕ್ರಮ ಕೈಗೊಳ್ಳದೆ ಭರವಸೆಯನ್ನು ಮಾತ್ರ ನೀಡುತ್ತಿದ್ದಾರೆ. ಇದರ ದುರಸ್ತಿ ಯಾವಾಗ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಪ್ರಮೋದ್ ಕುಮಾರ್ ಈಗಾಗಲೇ ಪುತ್ಯೆ ಹಾಗೂ ಮಾದೆರಿ ರಸ್ತೆ ಭಾಗಕ್ಕೆ ಮೂರು ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುಮೋದನೆ ದೊರಕಬೇಕಿದೆ. ಆದರೆ ಈ ರಸ್ತೆಯ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಮಾಡಿಸಿಕೊಡುವುದಾಗಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಶಿರಾಡಿಯಿಂದ ಹಾಸನ ಗಡಿಭಾಗದವರೆಗೆ ರಸ್ತೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲದ ಕಾರಣ ರಾತ್ರಿ ಸಮಯದಲ್ಲೂ ಘನ ವಾಹನಗಳಿಗೆ ಸಂಚರಿಸಲು ಅವಕಾಶ ನೀಡಬೇಕೆಂದು ಗ್ರಾಮಸ್ಥರಲ್ಲಿ ಅಭಿಪ್ರಾಯ ಬಂತು. ಈ ಬಗ್ಗೆ ತಹಶೀಲ್ದಾರ್ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಕೃಷಿ ಇಲಾಖೆಯಲ್ಲಿನ ಸವಲತ್ತುಗಳು ಜನಸಾಮಾನ್ಯರನ್ನು ತಲುಪುತ್ತಿಲ್ಲ ಸ್ಥಳೀಯ ಪಂಚಾಯತ್‌ನಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೃಷಿ ಇಲಾಖೆ ನೀಡಬೇಕು ಹಾಗೂ ಫಲಾನುಭವಿಗಳಿಗೆ ಕ್ಲಪ್ತ ಸಮಯದಲ್ಲಿ ಕೃಷಿ ಸೇವೆಗಳು ದೊರಕುವಂತಾಗಬೇಕು ಎಂದು ಜನ ಅಭಿಪ್ರಾಯ ಬಂದಾಗ ಗ್ರಾಮಸ್ಥರಿಗೆ ಹಾಗೂ ಕೃಷಿ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಈ ಸಂದರ್ಭ ಮಧ್ಯ ಪ್ರವೇಶಿಸಿದ ಉಪತಹಶೀಲ್ದಾರ್ ಗೋಪಾಲ.ಕೆ ತಮ್ಮ ದೂರುಗಳನ್ನು ಲಿಖಿತ ರೂಪದಲ್ಲಿ ಬರೆದುಕೊಟ್ಟಾಗ ಪರಿಶೀಲನೆ ನಡೆಸಿಕೊಡಲಾಗುವುದು ಎಂದರು. ಅಲ್ಲದೆ ಕೃಷಿಕರ ಮಕ್ಕಳಿಗೆ ಸಿಗುವ ವಿದ್ಯಾರ್ಥಿವೇತನದ ಬಗ್ಗೆ ಕೃಷಿಕರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶಗೊಂಡರು.
ಇಚಿಲಂಪ್ಪಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾಮ ಪಂಚಾಯತ್‌ಗೆ ಒಳಪಡಿಸಲು ಪೂರಕ ದಾಖಲೆ ಇದ್ದು ಪ್ರತ್ಯೇಕ ಗ್ರಾಮ ಪಂಚಾಯಿತಿನ ಕೂಗು ಸಭೆಯಲ್ಲಿ ಕೇಳಿ ಬಂದಿತು. ಇದು ತಾಲೂಕು ಮಟ್ಟದಲ್ಲಿ ಆಗುವ ಕಾರ್ಯವಲ್ಲ ಈ ಬಗ್ಗೆ ಸರಕಾರದ ಗಮನವನ್ನು ಸೆಳೆಯಲು ಸಭೆಯಲ್ಲಿ ಅಧಿಕಾರಿಗಳು ಸೂಚಿಸಿದರು.
ಅಡ್ಡ ಮತದಾನವನ್ನು ತಪ್ಪಿಸಲು ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಕಡಬ ತಾಲೂಕಿನಲ್ಲಿ ಶೇಕಡ 82ರಷ್ಟು ಪೂರ್ಣಗೊಂಡಿದ್ದು ಶೇಕಡ 12ರಷ್ಟು ಮಾತ್ರ ಬಾಕಿಯಾಗಿವೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

ಪ್ರತೀ ಬಾರಿಯೂ ಗ್ರಾಮ ಸಭೆ ನಡೆಯುತ್ತದೆ. ಲಿಖಿತ ಅರ್ಜಿ ಪಡೆದುಕೊಳ್ಳಲಾಗುತ್ತದೆ. ಆದರೆ ಸಮಸ್ಯೆ ಬಗೆಹರಿಯುತ್ತಿರುವುದು ವಿರಳ ಎನ್ನುವುದು ಗ್ರಾಮಸ್ಥರ ನಡುವೆ ಅಭಿಪ್ರಾಯವಾಗಿ ಮೂಡಿಬಂತು. ಕನಿಷ್ಟ ಈ ಬಾರಿಯ ತಹಶೀಲ್ದಾರ್ ಗ್ರಾಮವಾಸ್ತವ್ಯ ಪ್ರಯೋಜನಕಾರಿಯಾಗಲಿ ಎಂದು ಸಾರ್ವಜನಿಕರು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭ 4 ಮಂದಿ ಫಲಾನುಭವಿಗಳಿಗೆ ವಿವಿಧ ಪಿಂಚಣಿಯ ಪತ್ರ ತಹಶೀಲ್ದಾರ್ ನೀಡಿದರು. ಸಭೆಯಲ್ಲಿ ತಾಲೂಕು ಪಂಚಾಯತ್‌ನ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವನಿತಾ, ಉಪಾಧ್ಯಕ್ಷೆ ಭವಾನಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಸಂದೀಪ್, ಲೋಕೋಪಯೋಗಿ ಇಲಾಖೆಯ ಪ್ರಮೋದ್ ಕುಮಾರ್, ಆರೋಗ್ಯ ಇಲಾಖೆಯ ಡಾ.ಚಂದ್ರಶೇಖರ್, ಅಬಕಾರಿ ಉಪನಿರೀಕ್ಷಕ ಅಬ್ದುಲ್ ಹಮೀದ್, ಕೃಷಿ ಇಲಾಖೆಯ ಭರಮಣ್ಣನವರ್, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಪುಷ್ಪಾವತಿ, ವಿದ್ಯುತ್ ಇಲಾಖೆಯ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ವಿಠಲ್, ಆರಕ್ಷಕ ಸಿಬ್ಬಂದಿ, ಪ್ರತಾಪ್, ಕೌಕ್ರಾಡಿ ಪಂಚಾಯತಿನ ಅಭಿವೃದ್ಧಿ ಅಧಿಕಾರಿ ಮಹೇಶ್, ಕಂದಾಯ ಇಲಾಖೆ ಸಿಬ್ಬಂದಿಗಳು, ಜನಪ್ರತಿನಿಧಿಗಳಾದ ಭಾಸ್ಕರ ಗೌಡ ಇಚಿಲಂಪ್ಪಾಡಿ, ಬಾಲಕೃಷ್ಣ ಬಾಣಜಾಲ್, ರವಿಪ್ರಸಾದ್ ಶೆಟ್ಟಿ, ವರ್ಗೀಸ್ ಅಬ್ರಹಾಂ,ಪಂಚಾಯತ್ ಸದಸ್ಯ ಹನೀಫ್, ಎಂ ಕೆ ಇಬ್ರಾಹಿಂ, ಎನ್.ವಿ.ವ್ಯಾಸ, ನ್ಯಾಯವಾದಿ ಇಸ್ಮಾಯಿಲ್, ಪಂಚಾಯತ್ ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Reply

error: Content is protected !!